ವಾಷಿಂಗ್ಟನ್ : ನಿರೀಕ್ಷೆಯಂತೆ ಭಾರತ – ಯುರೋಪ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಮೆರಿಕದ ಕಣ್ಣನ್ನು ಕೆಂಪಗೆ ಮಾಡಿದೆ. ಈ ಒಪ್ಪಂದದಿಂದ ನಾನು ನಿರಾಸೆಗೊಂಡಿದ್ದೇನೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದವು ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆಯೇ ಎಂದು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ, ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ನಾವು ಭಾರತದ ಮೇಲೆ 25% ಸುಂಕಗಳನ್ನು ವಿಧಿಸಿದ್ದೇವೆ. ಕಳೆದ ವಾರ ಏನಾಯಿತು ಎಂದು ಊಹಿಸಿ..? ಯುರೋಪಿಯನ್ನರು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಯೂರೋಪ್ ಮುಂಚೂಣಿಯಲ್ಲಿದೆ. ಭಾರತ ರಷ್ಯಾದಿಂದ ತೈಲ ಖರೀದಿಸಲು ಆರಂಭಿಸಿದಾಗ ಯರೋಪ್ ಭಾರತದಿಂದ ಸಂಸ್ಕರಣೆಯಾದ ತೈಲವನ್ನು ಖರೀದಿಸುತ್ತಿದ್ದವು. ಇದ್ದರಿಂದಾಗಿ ಈ ಯುದ್ಧಕ್ಕೆ ಯುರೋಪ್ ಹಣಕಾಸಿನ ಸಹಾಯ ಮಾಡುತ್ತಿತ್ತು ಎಂದು ದೂರಿದರು.

ರಷ್ಯಾಗೆ ಹಣಕಾಸಿನ ಸಹಾಯ ಮಾಡಿದ್ದಕ್ಕೆ ಅಮೆರಿಕ ಭಾರತದ ಮೇಲೆ ದಂಡದ ರೂಪದಲ್ಲಿ 25% ಸುಂಕ ಹೇರಿದೆ. ಆದರೆ ಯರೋಪ್ ಭಾರತದ ಮೇಲೆ ದಂಡ ಹಾಕುವ ಅಮೆರಿಕದ ಪ್ರಯತ್ನದ ಜೊತೆ ಕೈಜೋಡಿಸಲಿಲ್ಲ. ವ್ಯಾಪಾರ ಒಪ್ಪಂದ ಮಾಡಲು ಬಯಸಿದ್ದರಿಂದ ಭಾರತದ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದರು.
ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದೆ. ಆದರೆ ಅಮೆರಿಕ ಡೈರಿ ಮತ್ತು ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆಯಬೇಕೆಂದು ಬೇಡಿಕೆ ಇರಿಸಿದೆ. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ಬೇಡಿಕೆಯನ್ನು ಒಪ್ಪಿಗೆ ನೀಡದ ಕಾರಣ ಇಲ್ಲಿಯವರೆಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿಲ್ಲ ಎನ್ನಲಾಗಿದೆ.















