ಮೈಸೂರು(Mysuru): ಕೆ.ಎಂ. ನಿಶಾಂತ್ ಅವರ ಜನ ಸೇವಾ ಕೇಂದ್ರ ಹಾಗು ವಿಪ್ರ ಸಹಾಯವಾಣಿ ವತಿಯಿಂದ ಇಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ‘ಪುರುಷೋತ್ತಮ ಸ್ವಯಂ ಉದ್ಯೋಗ ಸಾಲ’ ಯೋಜನೆಯ ಅನುಮೋದನೆ ಪತ್ರಗಳನ್ನು ಫಲಾನುಭವಿಗಳಿಗೆ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರದಲ್ಲಿ ವಿತರಿಸಲಾಯಿತು.
ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಫಲಾನುಭವಿಗಳಿಗೆ ಸಾಲದ ಅನುಮೋದನೆ ಪತ್ರವನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಟಿ.ಎಸ್. ಶ್ರೀವತ್ಸ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಿ, ಸ್ವಯಂ ಉದ್ಯೋಗಸ್ಥರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿದೆ ಎಂದರು.
ಹಲವಾರು ವರ್ಷಗಳಿಂದ ಬ್ರಾಹ್ಮಣರಿಗೆ ಸರ್ಕಾರದ ಯಾವುದೇ ಯೋಜನೆಗಳು ಇಲ್ಲದಿದ್ದ ಕಾರಣ ಯೋಜನೆಗೆ ಬೇಕಿರುವ ದಾಖಲೆಗಳು, ಪ್ರಕ್ರಿಯೆಗಳ ಬಗ್ಗೆ ಹಲವರಿಗೆ ಅರಿವಿರಲಿಲ್ಲ ಮತ್ತು ಯೋಜನೆಯ ಮಾಹಿತಿ ಸಾಕಷ್ಟು ಜನರಿಗೆ ತಲುಪಿಲ್ಲ ಹೀಗಿದ್ದರೂ ವಿಪ್ರ ಸಹಾಯವಾಣಿ ಹಾಗೂ ಕೆ.ಎಂ. ನಿಶಾಂತ್ ಜನ ಸೇವಾ ಕೇಂದ್ರದ ಮೂಲಕ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಬೇಕಿರುವ ಎಲ್ಲಾ ದಾಖಲೆಗಳನ್ನು ಪಡೆದು ಸವಲತ್ತುಗಳನ್ನು ತಲುಪಿಸುತ್ತಿರುವುದು ಶ್ಲಾಘನಿಯ ಎಂದರು.
ಈಗಾಗಲೆ ರಾಜ್ಯ ಸರ್ಕಾರ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ 5000 ರೂ. ಸಹಾಯಧನವನ್ನು ನೀಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಮೂಡಿಸಿ ಕಾಶಿಗೆ ತೆರಳಲು ಉತ್ತೇಜಿಸಬೇಕಿದೆ ಹಾಗೂ ಶೀಘ್ರವಾಗಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇ.ಡಬ್ಲೂ.ಎಸ್. ಅನ್ನು ಅನುಷ್ಠಾನಕ್ಕೆ ತರಲಿದೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಕೆ.ಎಂ. ನಿಶಾಂತ್ ರವರು ಕಳೆದ ಒಂದು ತಿಂಗಳಿಂದ ನಮ್ಮ ಜನಸೇವಾ ಕೇಂದ್ರದಲ್ಲಿ 150 ಫಲಾನುಭವಿಗಳಿಗೆ ಈ ಯೋಜನೆಯ ಅರ್ಜಿಗಳನ್ನು ವಿತರಿಸಲಾಗಿತ್ತು. ಅದರಲ್ಲಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ದಾಖಲೆ ಹೊಂದಿದ್ದ 54 ಅರ್ಜಿಗಳು ಅನುಮೋದನೆಗೊಂಡಿದೆ. ಇಂದು ಸಾಂಕೇತಿಕವಾಗಿ 10 ಜನ ಫಲಾನುಭವಿಗಳಿಗೆ ಸಾಲದ ಆದೇಶ ಪತ್ರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯ ಮೂಲಕ 1ಲಕ್ಷ ರೂ ಸಬ್ಸಿಡಿ ಸಾಲ ದೊರಕುತ್ತಿದ್ದು 20 ಸಾವಿರ ರೂಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು. ಉಳಿದ 80 ಸಾವಿರವನ್ನು ಸಾಲದ ರೂಪದಲ್ಲಿ ಕೆನರಾ ಬ್ಯಾಂಕ್’ನ ಮೂಲಕ ಕೊಡಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಇಡಬ್ಲೂಎಸ್ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ, ಕೆನರಾ ಬ್ಯಾಂಕ್ ನ ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಹಾಗು ಪ್ರಾಜೆಕ್ಟ್ ರಿಪೋರ್ಟ್ ಅನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಅರ್ಜಿಯೊಂದಿಗೆ ಈ ಮೇಲಿನ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಕಚೇರಿಯಲ್ಲಿ ಸಲ್ಲಿಸ ಬಹುದು ಹಾಗು ಹೆಚ್ಚಿನ ಮಾಹಿತಿಗಾಗಿ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಪ್ರ ಸಹಾಯ ವಾಣಿಯ ವಿಕ್ರಂ ಅಯ್ಯಂಗಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಬಾಲಕೃಷ್ಣ, ಕೆ.ಪಿ. ಮಧುಸೂಧನ್, ರಾಮಪ್ರಸಾದ್, ಎಂ.ಎನ್. ಧನುಷ್, ಮಧು, ಜಯರಾಂ, ಸತೀಶ್, ವಿಜಯ್ ಕುಮಾರ್, ಜಗದೀಶ್ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.