ಶಿಸ್ತು ಎಂದರೆ ಹೊಡೆದು, ಬಡಿದು. ಬೈದು ದಂಡಿಸಿ ಕಲಿಸುವುದಲ್ಲ ಬುದಿವಂತಿಕೆಯಿಂದ ಬರುವ ಲಾಭಗಳು, ಸೋಮಾರಿತನದಿಂದ ಉಂಟಾಗುವ ಕಷ್ಟನಷ್ಟಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಅದಕ್ಕೆ ತಕ್ಕ ಅಗತ್ಯವಾದ ಕಥೆಗಳನ್ನು ಹೇಳಬೇಕು ಪಂಚತಂತ್ರಗಳು. ತೆನಾಲಿ ರಾಮಕೃಷ್ಣ, ಅಕ್ಟರ್ -ಬೀರ್ ಬಲ್ ಕತೆಗಳು, ಮಹನೀಯರ ಯಶೋಗಾಥೆ ಮತ್ತು ಪುರಾಣ ಪುರುಷರ ಕಥೆಗಳನ್ನು ಹೇಳಬೇಕು ಉದಾಹರಣೆಗೆ ಗಾಂಧೀಜಿಯವರ ತಾಯಿ ತಮ್ಮ ಮಗನಿಗೆ ಸತ್ಯ ಹರಿಶ್ಚಂದ್ರನ ಬಗ್ಗೆ ಹೇಳಿದ್ದರಿಂದ ಅವರು ಸತ್ಯವಾದಿಯಾದರು ಆದರೆ ಪುರಾಣಗಳಿವೆಯೇ? ಆ ಪಾತ್ರಗಳು ಜೀವಂತವಾಗಿದ್ದವೇ? ಎಂಬ ಪ್ರಶ್ನೆಗಳು ಅಪ್ರಸ್ತುತ ಅನಗತ್ಯ ನಾವು ಮಾಡಬೇಕಾದ್ದು ಆ ಪಾತ್ರಗಳಲ್ಲಿನ ವಿಶಿಷ್ಟತೆಯನ್ನೇ ಗುರುತಿಸುವುದು.
ಒಂದು ದೊಡ್ಡ ಕಾರ್ಪೊರೇಟ್ ಸಂಸ್ಥೆಯಲ್ಲಿ ಅವರಿಗೆ ನಾಯಕತ್ವ ಕುರಿತಂತೆ ಉತ್ತಮ ತರಬೇತಿಯನ್ನು ನೀಡಿ ಅವರುಗಳನ್ನು ಲೀಡರ್ಗಳನ್ನಾಗಿ ಮಾಡುವ ಮಹಾನ್ ಮ್ಯಾನೇಜ್ಮೆಂಟ್ ಗುರುವಿಗಿಂತ ಮಕ್ಕಳನ್ನು ಉತ್ತಮವಾಗಿ ರೂಪಿಸುವ ತಂದೆಯೇ ಮಹಾನ್ ಮೇಧಾವಿಯೆಂಬುದು ನನ್ನ ನಂಬಿಕೆ ಹಾಗೆಯೇ ತನ್ನ ಮಕ್ಕಳಿಗೆ ಮನೆಗೆಲಸಗಳನ್ನು ಕಲಿಸುವ ತಾಯಿ ಅದ್ಭುತ ಲೆಕ್ಚರರ್ ಆಕೆ ಮ್ಯಾನೇಜ್ ಮೆಂಟ್ ಕೋರ್ಸ್ಗಳನ್ನು ಓದದಿದ್ದರೂ ಮನೆಯನ್ನು ಹೇಗೆ ಸರಿಪಡಿಸಬೇಕು ? ಸುಂದರವಾಗಿ ರೂಪಿಸುವುದು ಹೇಗೆ? ವರಮಾನಕ್ಕೆ ತಕ್ಕಹಾಗೆ ಮನೆಯ ಖರ್ಚುಗಳನ್ನು ಹೇಗೆ ನಿಭಾಯಿಸಬೇಕು? ಮನೆಯಲ್ಲಿ ಕೆಲಸಗಳನ್ನು ನಾಲ್ಕು ಮಂದಿ ಸೇರಿ ಹೇಗೆ ಮಾಡಬೇಕು? ಚೆನ್ನಾಗಿ ಕೆಲಸ ಮಾಡಿದ ಮಕ್ಕಳಿಗೆ ಬೋನಸ್ ನಂತಹ ಉಡುಗೊರೆಗಳನ್ನು ಹೇಗೆ ನೀಡಬೇಕು? ಮುಂತಾದವನ್ನು ಕಲಿಸಿ ಅವರಿಗೆ ತಮ್ಮ ಕೆಲಸಗಳನ್ನು ತಾವೇ ತಿಳಿದುಕೊಂಡು ಮಾಡುವ ಶಿಸ್ತನ್ನು ಕಲಿಸುತ್ತಾಳೆ ಟೆನ್ನಿಸನ್ ಎಂಬ ಕವಿ ‘ನಮ್ಮ ಪ್ರವರ್ತನೆಗೆ ಮೂಲ ಕಾರಣ ತಾಯಿಯೇ” ಎಂದಿದ್ದಾರೆ ”ಈ ಪ್ರಪಂಚದಲ್ಲಿ ಅತ್ಯುತ್ತಮ ವ್ಯಕ್ತಿ ಕೂಡಾ ಅಮ್ಮನೇ ”ಎಂದು ಒತ್ತಿ ಹೇಳಿದ್ದಾರೆ ಟೆನ್ನಿಸನ್
ತರಬೇತಿಗನುಸಾರವಾಗಿ ರಕ್ಷಣೆ :
ಸರ್ಕಸ್ನಲ್ಲಿ ಆನೆ ಎರಡು ಕಾಲುಗಳ ಮೇಲೆ ನಿಂತು ನೃತ್ಯ ಮಾಡುವುದು, ಕುದುರೆಗಳು ಫುಟ್ ಬಾಲ್ ಆಡುವುದು ಹಾಗೂ ಕೋತಿ. ನಾಯಿಗಳು ಅನೇಕ ಆಶ್ಚರ್ಯಕರವಾದ ಕಸರತ್ತುಗಳನ್ನು ಮಾಡುವುದನ್ನು ನಾವು ನೋಡುತ್ತಿರುತ್ತೇವೆ. ಇದೆಲ್ಲವೂ ಅವುಗಳಿಗೆ ನೀಡುವ ತರಬೇತಿಯಿಂದಾಗಿ ಸಾಧ್ಯವಾಯಿತೆಂಬುದು ನಮ್ಮೆಲ್ಲರಿಗೂ ಗೊತ್ತು ರಷ್ಯಾದಲ್ಲಿ ಈ ತರಬೇತಿ ನೀಡುವವರು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ “ಲೆಕ್ಕಗಳನ್ನು ಮಾಡುವ ಕುದುರೆಯನ್ನು” ತಯಾರಿಸಿದ್ದಾರೆ. ಅದನ್ನು ಎರಡು ಎರಡು ಎಷ್ಟು ಎಂದು ಕೇಳಿದರೆ, ಅದು ಅಲ್ಲಿ ಸಾಲಾಗಿರುವ ಅಂಕಿಗಳ ಬೋರ್ಡ್ ಗಳ ಬಳಿಗೆ ಹೋಗಿ ನಾಲ್ಕು ಅಂಕಿಗಳಿರುವ ಬೋರ್ಡನ್ನು ತೆಗೆದುಕೊಂಡುಬರುತ್ತದೆ ಈ ರೀತಿಯಾಗಿ ಗುಣಾಕಾರ ಭಾಗಾಕಾರ ಕಳೆಯುವಿಕೆಗಳಂತಹ ಅದೆಷ್ಟೋ ಲೆಕ್ಕಗಳನ್ನು ಮಾಡಿ ಪ್ರೇಕ್ಷಕರಲ್ಲಿ ಅಚ್ಚರಿಯನ್ನುಂಟುಮಾಡುತ್ತದೆ ಇತ್ತೀಚೆಗೆ ಮತ್ತೊಬ್ಬ ತುಂಟ ಹುಡುಗ ತನ್ನ ನಾಯಿಗೆ ಒಂದು ತುಂಟತನದ ಕೆಲಸವನ್ನು ಕಲಿಸಿದ ಅದೇನೆಂದರೆ ಪಕ್ಕದ ಮನೆಗೆ ಹೋಗಿ ಕಳ್ಳತನದಿಂದ ನ್ಯೂಸ್ ಪೇಪರ್ ಟೆಲಿಫೋನ್ ಡೈರೆಕ್ಟರಿಗಳನ್ನು ಅವರ ಮನೆಯವರಿಗೆ ಗೊತ್ತಾಗದ ಹಾಗೆ ಎತ್ತಿಕೊಂಡು ಬರುವುದು’
ನಾನು ಹೇಳುವುದೇನೆಂದರೆ ತರಬೇತಿ ಎಂಬ ಪಕ್ರಿಯೆ ಮೂಲಕ ಮೂಕವಾಣಿಗಳು ಇಷ್ಟೆಲ್ಲಾ ವಿಸ್ಮಯಗಳನ್ನು ಮಾಡಬೇಕಾದರೆ ಎಲ್ಲವೂ ಸರಿಯಾಗಿದ್ದು ಬೇಕಾದ ಸೌಲಭ್ಯಗಳಿಂದ ಮೆರೆದಾಡುವ ಮಾನವನಿಗೇಕೆ ಸಾಧ್ಯವಿಲ್ಲ? ಇದು ಕಲಿಸಿಕೊಡುವುದರಲ್ಲಿನ ದೋಷವೇ ಅಥವಾ ಕಲಿತುಕೊಳ್ಳುವುದರಲ್ಲಿರುವ ಲೋಪವೇ ಎಂಬುದನ್ನು ಮಾನಸಿಕಶಾಸ್ತ್ರಜ್ಞರು ಸಾಕಷ್ಟು ಸಂಶೋಧನೆಗಳನ್ನು ಮಾಡಿ, ಕೊನೆಗೆ ಕಲಿಸುವುದರಲ್ಲೇ ಲೋಪವಿದೆಯೆಂದು ಸ್ಪಷ್ಟಪಡಿಸಿದರು. ಅಂದರೆ ಈ ಕಾಲದ ಮಕ್ಕಳ ಪ್ರ ವರ್ತನೆಯಲ್ಲಿ ವ್ಯತ್ಯಾಸಗಳಿರುವುದಕ್ಕೆ ಕಾರಣ ತಾಯಿ ತಂದೆಯರ ಅಥವಾ ವಿದ್ಯಾ ಬುದ್ದಿ ಕಲಿಸಿದ ಉಪಾಧ್ಯಾಯರು ಅಥವಾ ಸುತ್ತಲೂ ಇರುವ ಸಮಾಜವೆಂಬುದು ಅಲ್ಲಗಳೆಯಲಾಗದ ಸತ್ಯ ಈ ಮೂರು ವ್ಯವಸ್ಥೆಗಳಿಂದಲ್ಲದೆ ಮಕ್ಕಳು ಬೇರೆಲ್ಲಿಂದ ತಾನೇ ಕಲಿತುಕೊಳ್ಳಲು ಸಾಧ್ಯ?
ಮಹಾನ್ ಲೀಡರ್ ಗಿಂತ ಒಳ್ಳೆ ತಾಯಿ ತಂದೆಯರೇ ಮಹನೀಯರು :
ಮಕ್ಕಳು ಯಾವುದೇ ರಂಗದಲ್ಲಿ ಗೆಲುವು ಸಾಧಿಸಬೇಕಾದರೂ ಹೆತ್ತವರು ಮೂರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ ಒಬ್ಬ ಆಂಗ್ಲ ಕವಿ ಮೊದಲನೆಯದಾಗಿ ಮಕ್ಕಳನ್ನು ಉತ್ಸಾಹಭರಿತರನ್ನಾಗಿಸಬೇಕು ಎರಡನೆಯದಾಗಿ ಆತ್ಮವಿಶ್ವಾಸ ಬೆಳೆಸಬೇಕು ಇನ್ನು ಮೂರನೆಯದಾಗಿ ಹೆತ್ತವರಲ್ಲಿ ನಿರುತ್ಸಾಹವೆಂಬುದು ಇರಲೇಬಾರದು ಈ ಮೂರೂ ವಿಷಯಗಳನ್ನು ಅನುಸರಿಸಿದ ಪೇರೆಂಟ್ಸ್ ತಮ್ಮ ಮಕ್ಕಳನ್ನು ಗೆಲುವಿನೆಡೆಗೆ ನಡೆಸಿದವರಾಗುತ್ತಾರೆ ಅಂತಹ ತಾಯಿ-ತಂದೆಯರು ಉತ್ತಮ ನಾಯಕನಿಗಿಂತ ಸರ್ವೋತ್ತಮರು ಏಕೆಂದರೆ ಆ ಮಹಾನ್ ನಾಯಕನ ಪೇರೆಂಟ್ಸ್ ಈ ಮೂರೂ ಸೂತ್ರಗಳನ್ನು ಪಾಲಿಸಿದವರು.
ತಾಯಿ-ತಂದೆಯರ ಜವಾಬ್ದಾರಿ ಕೇವಲ ಮಕ್ಕಳನ್ನು ಬೆಳೆಸುವುದು ಮಾತ್ರವಲ್ಲ. ಜವಾಬ್ದಾರಿಯುತವಾಗಿ ಬೆಳೆಸಬೇಕು. ನಾಳೆ ಅವರು ಈ ದೇಶಕ್ಕೆ, ಸಮಾಜಕ್ಕೆ ಸೇವೆ ಸಲ್ಲಿಸುವಂತೆ ರೂಪಿಸಬೇಕು. ಅದಕ್ಕೆ ತಕ್ಕ ಹಾಗೆ ಅವರು ಕೂಡಾ ಬದಲಾಗಬೇಕು. ಪದತಿಗಳನ್ನು ಬದಲಾಯಿಸಿಕೊಳ್ಳಬೇಕು. ತಾವು ಹೇಳಿದ್ದನ್ನು ಮಾಡಿ ತೋರಿಸಬೇಕು.
ಅತಿಯಾಗಿ ಆಶಿಸಬೇಡಿ :
ಇತ್ತೀಚೆಗೆ ಕೆಲವೊಂದು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ಉದ್ಯೋಗದಿಂಡ ತೆಗೆದುಹಾಕಿದರೆಂಬ ವಿಷಯವನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ನಿಜ ಹೇಳಬೇಕೆಂದರೆ ಅವರೆಲ್ಲಾ ಓದಿನಲ್ಲಿ ತೊಂಬತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಆನಂತರ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಆಯ್ಕೆಯಾದವರೇ ಆದರೆ ಅವರನ್ನು ಕೆಲಸದಿಂದ ತೆಗೆದು ಹಾಕಲು ಅವರ ಪ್ರವರ್ತನೆ, ನಡವಳಿಕೆಗಳು ಸರಿಯಾಗಿಲ್ಲವೆಂದು, ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ವ್ಯಕ್ತಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲವೆಂದು, ಎಷ್ಟು ಕಾಲವಾದರೂ ಕೆಲಸ ಕಲಿತುಕೊಳ್ಳುತ್ತಿಲ್ಲವೆಂದು. ಕೆಲಸಕ್ಕಿಂತ ಉನ್ನತ ಶಿಕ್ಷಣಗಳ ಬಗ್ಗೆಯೇ ಹೆಚ್ಚು ಶ್ರದೆ ತೋರುತ್ತಿದ್ದಾರೆಂದು, ಕಮ್ಯೂನಿಕೇಷನ್ಸ್ ಸರಿಯಾಗಿಲ್ಲವೆಂದು, ಕಂಪ್ಯೂಟರ್ ಚಾಟಿಂಗ್ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆಂದು, ಕೊನೆಯದಾಗಿ ಅವರಲ್ಲಿ ಸ್ವಲ್ಪವೂ ನಾಯಕತ್ವ ಲಕ್ಷಣಗಳೇ ಇಲ್ಲವೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ನಾಯಕತ್ವದ ಲಕ್ಷಣಗಳಿರಬೇಕೆಂದರೆ ಆತನ ಪೇರೆಂಟ್ಸ್ ಏನಾದರೂ ಕಲಿಸಬೇಕಲ್ಲ! ಬಾಲ್ಯದಲ್ಲಿ ಆತನ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ತಾಯಿ-ತಂದೆಯರಿದ್ದಾರೆ. ಕೊನೆಗೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಕೂಡಾ ಅನ್ನ ಸಾರು ಬೆರೆಸಿ ಕೈ ತುತ್ತು ತಿನ್ನಿಸುವ ತಾಯಂದಿರೂ ಇದ್ದಾರೆ. ಇದರಿಂದಾಗಿ ಅವರಲ್ಲಿನ ಮೋಟಾರ್ ಸ್ಕಿಲ್ಸ್ ನಾಶವಾಗಿಬಿಡುತ್ತವೆ. ಕೊನೆಗೆ ಒಂದು ಪೇಪರನ್ನು ಕೂಡಾ ಸರಿಯಾಗಿ ಕತ್ತರಿಸಲಾಗದ ಸ್ಥಿತಿಗೆ ತಲುಪುತ್ತಾರೆ.
ಇನ್ನು ಫ್ರೆಂಡ್ಸ್ ವಿಷಯಕ್ಕೆ ಬಂದರೆ. ಅದರಲ್ಲೂ ಕೂಡಾ ತಾಯಿ ತಂದೆಯರ ಹಸ್ತಕ್ಷೇಪವಿರುತ್ತದೆ, ಯಾರೊಂದಿಗೆ, ಎಷ್ಟು ಹೊತ್ತು, ಯಾವಾಗ ಹೇಗೆ ಮಾತನಾಡಬೇಕೋ ನಿರ್ಧರಿಸುತ್ತಾರೆ ಕೆಲವು ಸಂದರ್ಭಗಳಲ್ಲಿ ಆ ವಿದ್ಯಾರ್ಥಿಗೆ ಸ್ನೇಹಿತರೇ ಇರುವುದಿಲ್ಲ ಸರ್ವಸ್ವವೂ ತಾಯಿಯೇ ಅಂತಹವರು ಎಷ್ಟು ಅಂಕಗಳನ್ನು ಪಡೆದುಕೊಂಡರೂ, ರಾಂಕುಗಳನ್ನು ಗಳಿಸಿದರೂ ಕಾಡಿನ ಟಾರ್ಜಾನ್, ಮೋಗ್ಲಿಗಳಂತೆಯೇ ವರ್ತಿಸುತ್ತಾರೆ.
ಪೋಷಣೆಗೆ ತಕ್ಕ ಬೆಳವಣಿಗೆ!
ಹಿರಿಯ ಪಾಲನೆ ಪೋಷಣೆ ಹೇಗಿರುತ್ತದೆಯೋ, ಹಾಗೆ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆಂಬುದು ಅಲ್ಲಗೆಳೆಯಲಾಗದ ಸತ್ಯ ಹಿಂದಿನ ದಿನಗಳಲ್ಲಿ ಕುಲ, ಜಾತಿ, ವೃತ್ತಿಗಳು ವಂಶ ಪಾರಂಪರ್ಯವಾಗಿ ಅದೇ ರೀತಿಯಾಗಿ ಅಭಿವೃದಿ ಹೊಂದಿದವು ಒಳ್ಳೆಯ ದಾಗಲಿ, ಕೆಟ್ಟದ್ದಾಗಲಿ ಮಕ್ಕಳು ತಮ್ಮ ಹಿರಿಯರನ್ನು ಯಥಾವತ್ತಾಗಿ ಅನುಕರಿಸುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ವಿಷಯ ತಮ್ಮನ್ನು ಸಾಕಿ ಬೆಳೆಸುತ್ತಿರುವುದು ಮನುಷ್ಯರಾದರೂ, ಪ್ರಾಣಿಗಳಾಗಿದ್ದರೂ ಆ ಮಕ್ಕಳಿಗೆ ಗೊತ್ತಾಗುವುದಿಲ್ಲ ತಮ್ಮ ಹಿರಿಯರು ಹೇಗಿರುತ್ತಾರೋ ಹಾಗೆ ವರ್ತಿಸುತ್ತಾರೆ.
ಟಾರ್ಜನ್ ಕುರಿತಂತೆ ಎಲ್ಲಾ ಮಕ್ಕಳಿಗೂ ಗೊತ್ತು. ಎಡ್ಗಾರ್ ಬಾರೋಸ್ ಎಂಬ ಲೇಖಕ ಸೃಷ್ಟಿಸಿದ ಆ ಹೀರೋ ಕಾಡುಗಳಲ್ಲಿ ಪ್ರಾಣಿಗಳ ಮಧ್ಯೆಯೆ ಬೆಳೆದು ದೊಡ್ಡವನಾದ ಪಾಣಿಗಳೊಂದಿಗೆ ಅನೇಕ ಸಾಹಸಗಳನ್ನು ಮಾಡಿದ.ಹಾಗೆಯೇ ಮತ್ತೊಬ್ಬ ಲೇಖಕ ರುಡ್ಕರ್ ಶಿಪ್ಪಿಂಗ್ ಎಂಬುವನು ಸೃಷ್ಟಿಸಿದ ಷೋಗ್ನಿ ಎಂಬ ಹುಡುಗ ಜಂಗಲ್ ಬುಕ್ ಕಾದಂಬರಿಯಲ್ಲಿ ಅನೇಕ ಆಶ್ಚರ್ಯಕರ ಅದ್ಭುತಗಳನ್ನು ಮಾಡುತ್ತಾನೆ. ಇವೆಲ್ಲಾ ಕಥೆಗಳು ಆದರೆ ನಿಜವಾಗಿ ನಡೆದ ಘಟನೆಗಳು ಕೂಡಾ ಸಾಕಷ್ಟಿವೆ. 1920 ರಲ್ಲಿ ಕೊಲ್ಕತ್ತದ ಸಮೀಪದಲ್ಲಿ ಅನಾಥಾಶ್ರಮವನ್ನುನಡೆಸುತ್ತಿದ್ದ ಜಾಲ್ ಸಿಂಗ್ ಎಂಬ ವ್ಯಕ್ತಿಗೆ ಕೆಲವೊಂದು ಗಿರಿಜನ ನಾಯಕರು ಇಬ್ಬರು ಹುಡುಗಿಯರನ್ನು ಕರೆತಂದು ಅವರಿಗೆ ಒಪ್ಪಿಸುತ್ತಾರೆ. ಆ ಮಕ್ಕಳನ್ನು ತೋಳಗಳಿಂದ ಬಿಡಿಸಿಕೊಂಡು ಬಂದಿದ್ದೇವೆಂದು ಅವರು ಹೇಳಿದರು ಆ ಜಾಲ್ ಸಿಂಗ್ ಅವರುಗಳಲ್ಲಿ ಐದು ವರ್ಷದ ಹುಡುಗಿಗೆ ಕಮಲ ಎಂದು, ಎರಡು ವರ್ಷದ ಹುಡುಗಿಗೆ ಅಮಲ ಎಂದು ಹೆಸರಿಟ್ಟರು. ಆ ಮಕ್ಕಳಿಬ್ಬರೂ ತೋಳಗಳ ಪೋಷಣೆಯಲ್ಲಿ ಬೆಳೆದಿದ್ದರಿಂದ ತೋಳಗಳಂತೆಯೇ ನಡೆಯುವುದು, ಅವುಗಳಂತೆಯೇ ಕಿರುಚುವುದು, ನೋಡುವುದು ಕೊನೆಗೆ ನೀರನ್ನು ಕೂಡಾ ನಾಲಗೆಯಿಂದಲೇ ಕುಡಿಯುತ್ತಿದ್ದರು.