ಮನೆ ಅಪರಾಧ ಮಹಿಳೆಯರ ತುಂಡರಿಸಿದ ದೇಹ ಪತ್ತೆ ಪ್ರಕರಣ: ಮಹಿಳೆ ಸೇರಿದಂತೆ ಇಬ್ಬರ ಬಂಧನ

ಮಹಿಳೆಯರ ತುಂಡರಿಸಿದ ದೇಹ ಪತ್ತೆ ಪ್ರಕರಣ: ಮಹಿಳೆ ಸೇರಿದಂತೆ ಇಬ್ಬರ ಬಂಧನ

0

ಮಂಡ್ಯ(Mandya):  ಇಬ್ಬರು ಮಹಿಳೆಯರ ದೇಹಗಳನ್ನು ತುಂಡರಿಸಿ ಎಸೆದಿದ್ದ ಜಿಲ್ಲೆಯ ಎರಡು ಪ್ರತ್ಯೇಕ ಪ್ರಕರಣವನ್ನು ಭೇದಿಸಿ, ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿ ಕೋಡಿ ಹಳ್ಳಿ ಕಾಲನಿಯ ವ್ಯಕ್ತಿ ಮತ್ತು ಪಾಂಡವ ಪುರ ತಾಲೂಕು ಹರವು ಗ್ರಾಮದ ಒಬ್ಬ ಮಹಿಳೆ ಬಂಧಿತ ಆರೋಪಿಗಳು.

ಮೈಸೂರು ದಕ್ಷಿಣ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಪ್ರವೀಣ್‌ ಮಧುಕರ್‌ ಪವಾರ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಆರೋಪಿಗಳು ಮೂರು ಕೊಲೆಗಳನ್ನು ಮಾಡಿರುವುದಲ್ಲದೇ  ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸ ದುರ್ಗದ ಪಾರ್ವತಿ, ಚಾಮರಾಜ ನಗರ ಟೌನ್‌ ನಿವಾಸಿ ಗೀತಾ ಅಲಿಯಾಸ್‌ ಪುಟ್ಟಿ ಕೊಲೆಯಾದವರು ಎಂದು ತಿಳಿಸಿದ್ದಾರೆ.

ಕೊಲೆಗೆ ಕಾರಣವೇನು ?:

ಹಣಕಾಸಿನ ವ್ಯವಹಾರ, ವೈಯಕ್ತಿಕ ಈರ್ಷೆ, ಅಕ್ರಮ ಲಾಭಕ್ಕಾಗಿ ಆರೋಪಿಗಳಿಬ್ಬರೂ ಈ ಕೊಲೆಗಳನ್ನು ಮಾಡಿದ್ದಾರೆ. ಕೊಲೆಯಾದ ಮಹಿಳೆಯರಿಬ್ಬರು ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು, ಗಾರ್ಮೆಂಟ್ಸ್‌ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪಾರ್ವತಿಯನ್ನು ಮೇ 30 ರಂದು, ಗೀತಾಳನ್ನು ಜೂನ್ 3 ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್‌ಗಳನ್ನು ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆಗಳಲ್ಲಿ ಬೀಸಾಡಿಸಿದ್ದಾರೆ ಎಂದು ವಿವರಿಸಿದರು.

ಪ್ರಕರಣದ ಹಿನ್ನೆಲೆ ?: ಜೂನ್ 7 ರಂದು ಪಾಂಡವ ಪುರ ತಾಲೂಕು ಬೇಬಿ ಗ್ರಾಮದ ಕೆರೆ ಕೋಡಿ ಕಟ್ಟೆಯ ಕೆಳಗೆ ಹರಿಯುವ ನೀರಿನಲ್ಲಿ 30 – 32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದ ಮಾಡರ ಹಳ್ಳಿ ರಸ್ತೆ ಬಳಿ ಸಿಡಿಎಸ್‌ ನಾಲೆಗೆ ಸಂಪರ್ಕಿಸುವ ಸಾರೋಡು ಹಳ್ಳದ ಪಕ್ಕದ ಭತ್ತದ ಗದ್ದೆಯಲ್ಲಿ 40 – 45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚಿತ ಮಹಿಳೆಯರ ಶವಗಳು ಪತ್ತೆಯಾಗಿದ್ದವು.

ಎರಡೂ ಪ್ರಕರಣಗಳಲ್ಲಿ ತುಂಡರಿಸಿದ ಇಬ್ಬರು ಮಹಿಳೆಯರು ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಕುಮುದ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ, ಚಿತ್ರದುರ್ಗದವರೆಗೆ ಬೈಕ್‌ನಲ್ಲೇ ಕೊಂಡೊಯ್ದು ಶವ ಬಿಸಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮಂಡ್ಯ ಎಸ್ಪಿ ಎನ್‌. ಯತೀಶ್‌ ಅವರ ಮಾರ್ಗದರ್ಶನದಲ್ಲಿ ಶ್ರೀರಂಗ ಪಟ್ಟಣ ಡಿವೈಎಸ್‌ಪಿ ನೇತೃತ್ವದ ಪೊಲೀಸರ ತನಿಖಾ ತಂಡಗಳು ಉತ್ತಮವಾಗಿ ಕಾರ‍್ಯ ನಿರ್ವಹಿಸಿ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿವೆ. ಹೀಗಾಗಿ ತನಿಖಾ ತಂಡದಲ್ಲಿದ್ದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌, ಎಎಸ್‌ಪಿ ವೇಣು ಗೋಪಾಲ್‌, ಶ್ರೀರಂಗ ಪಟ್ಟಣ ಡಿವೈಎಸ್‌ಪಿ ಸಂದೇಶ್‌ ಕುಮಾರ್‌ ಗೋಷ್ಠಿಯಲ್ಲಿದ್ದರು.