ಮನೆ ರಾಜ್ಯ ಅವೈಜ್ಞಾನಿಕವಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ: ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಅವೈಜ್ಞಾನಿಕವಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ: ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

0

ಮೈಸೂರು(Mysuru): ನಗರದಿಂದ ಕೆಆರ್‌ಎಸ್‌ಗೆ ಸಾಗುವ ಮಾರ್ಗದಲ್ಲಿರುವ ರಿಂಗ್ ರಸ್ತೆಯ ಬಲಭಾಗದಿಂದ ಮಣಿಪಾಲ್ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಮೂರು ಕಡೆ ರೈಲ್ವೆ ಮೇಲ್ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಗರದ ಮೇಟಗಳ್ಳಿ ಬಳಿಯ ವರ್ತುಲ ರಸ್ತೆಯ ಬಳಿ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಶ್ರೀಧರ್, ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ಸ್ಥಾನ ಪಡೆದುಕೊಂಡಿದೆ. ಇಲ್ಲಿ ಕೈಗಾರಿಕಾ ಕ್ರಾಂತಿ ಒಂದೆಡೆಯಾದರೆ, ಅದಕ್ಕೆ ಪರ್ಯಾಯವಾಗಿ ಪ್ರವಾಸೋದ್ಯಮ ವಲಯ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವುದನ್ನು ದಾಖಲೆಗಳೇ ದೃಢೀಕರಿಸುತ್ತವೆ ಎಂದರು.

ಆದರೆ, ಇಂದು ಮೈಸೂರು ಅಪಘಾತಗಳ ವಲಯವಾಗಿ ಮಾರ್ಪಟ್ಟಿರುವುದನ್ನು ಪೊಲೀಸ್ ಇಲಾಖೆಯಲ್ಲಿ ಪ್ರಕರಣಗಳೇ ಸಾಕ್ಷೀಕರಿಸುತ್ತಿವೆ. ಅಧಿಕಾರಿ ವಲಯದ ಅಸಡ್ಡೆ ಪರಿಣಾಮ ಮೈಸೂರು ನಗರದಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ಗೆ ಸಾಗುವ ಮಾರ್ಗದಲ್ಲಿರುವ ರಿಂಗ್ ರಸ್ತೆಯ ಬಲಭಾಗದಿಂದ ಮಣಿಪಾಲ್ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಮೂರು ಕಡೆ ಅಂಡರ್ ಪಾಸ್ ರೈಲ್ವೆ ಮಲ್ಸೇತುವೆಗಳಿವೆ. ೧೫ ವರ್ಷಗಳ ಹಿಂದೆ ರೂಪಿಸಿದ ಅವೈಜ್ಞಾನಿಕ ಯೋಜನೆಯಿಂದಾಗಿ ಇಂದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.

ರಿಂಗ್ ರಸ್ತೆಯನ್ನು ೪ ಪಥದ ರಸ್ತೆಯನ್ನಾಗಿ ೧೫ ವರ್ಷದ ಹಿಂದೆ ನಿರ್ಮಿಸಿದ್ದು, ಅರಸೀಕೆರೆ ಸಾಗುವ ರೈಲ್ವೆ ಮಾರ್ಗ, ಬೆಲವತ್ತ ರೈಲ್ವೆ ಮಾರ್ಗ ಹಾಗೂ ಆರ್‌ಬಿಐ ಸಮೀಪದ ರೈಲ್ವೆ ಮಾರ್ಗ ಸೇರಿದಂತೆ ಮೂರೂ ರೈಲ್ವೆ ಟ್ರ್ಯಾಕ್ ಅಂಡರ್ ಪಾಸ್ ಬಳಿ ರಸ್ತೆಯನ್ನು ೪ ಪಥದ ಬದಲು ೨ ಪಥಕ್ಕೆ ಇಳಿಸಲಾಗಿದೆ. ಇದರಿಂದ ವಾಹನ ಸವಾರರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ನಿರಂತರವಾಗಿ ಅಪಘಾತಗಳಾಗಿ ಸಾವು, ನೋವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.

ಮುಂದಾಲೋಚನೆ ಹಾಗೂ ದೂರದೃಷ್ಠಿ ಇಲ್ಲದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಪರಿಣಾಮ ಆಗುತ್ತಿರುವ ಅನಾಹುತಗಳಿಗೆ ಹೊಣೆ ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮೈಸೂರಿಗೆ ಹೆಚ್ಚಾಗಿ ಪ್ರವಾಸಿಗರು ಬರುವುದರಿಂದ ಅವರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ಮೂರೂ ಭಾಗದಲ್ಲಿರುವ ರೈಲ್ವೆ ಅಂಡರ್ ಪಾಸ್ ಸೇತುವೆಯನ್ನು ವಿಸ್ತರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲೇಬೇಕು ಎಂದು ಹೇಳಿದರು.

ಕೆಆರ್‌ಎಸ್ ಮಾರ್ಗದಲ್ಲಿ ಮುಂದುವರೆದರೆ ಕಾಫಿ ಬೋರ್ಡ್ ಸಮೀಪ ಲೆವೆಲ್ ಕ್ರಾಸಿಂಗ್‌ನಲ್ಲಿ ಇದೇ ಪರಿಸ್ಥಿತಿ ಇದ್ದು, ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ದಸರಾ ವೇಳೆ ಉಂಟಾಗುವ ವಾಹನಗಳ ದಟ್ಟಣೆಯಿಂದ ನೂರಾರು ವಾಹನಗಳು ಕಿಲೋಮೀಟರ್ ದೂರಕ್ಕೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಆದಕಾರಣ, ಈ ಭಾಗದಲ್ಲಿ ತುರ್ತಾಗಿ ಮೇಲ್ಸೇತುವೆ ಆಗಬೇಕಿದೆ ಎಂದು ಆಗ್ರಹಿಸಿದರು.

ಪ್ರೇಮಾ ಶಂಕರೇಗೌಡ , ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಶಿವಣ್ಣ, ರಮೇಶ್, ರಾಮಕೃಷ್ಣ, ಪ್ರಸನ್ನ, ಸ್ವಾಮೀಗೌಡ, ರವಿ, ರಾಮಚಂದ್ರ, ಬೋರೇಗೌಡ, ಈಶ್ವರ, ಶಿವಣ್ಣ, ದಿನೇಶ್, ಕೃಷ್ಣಪ್ಪ, ಪ್ರಭಾಲರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಿಂದಿನ ಲೇಖನಮಹಿಳೆಯರ ತುಂಡರಿಸಿದ ದೇಹ ಪತ್ತೆ ಪ್ರಕರಣ: ಮಹಿಳೆ ಸೇರಿದಂತೆ ಇಬ್ಬರ ಬಂಧನ
ಮುಂದಿನ ಲೇಖನಚಿರತೆ ದಾಳಿ:  ವ್ಯಕ್ತಿಗೆ ತೀವ್ರ ಗಾಯ