ಮನೆ ಸ್ಥಳೀಯ ಇಂದಿನಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯ ಹಂಚಿಕೆ: ಡಾ ಕೆ ವಿ ರಾಜೇಂದ್ರ

ಇಂದಿನಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯ ಹಂಚಿಕೆ: ಡಾ ಕೆ ವಿ ರಾಜೇಂದ್ರ

0

ಮೈಸೂರು: ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರು ಮತದಾನ ಮಾಡಲು ಮುಂದೆ ಬರುವಂತೆ ಮಾಡಲು ಇಂದಿನಿಂದ ಮತದಾರರ ಮಾಹಿತಿ ಚೀಟಿಯನ್ನು ಹಂಚಲಾಗುವುದು. ಇದರಿಂದ ಮತದಾರರು ಆ ಚೀಟಿಯ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಪೋಲಿಂಗ್ ಸ್ಟೇಷನ್ನ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ.ವಿ ರಾಜೇಂದ್ರ ಅವರು ಮಾಹಿತಿ ನೀಡಿದರು.

Join Our Whatsapp Group

ಇಂದು ಸೆಸ್ಕಾಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದ್ದ ಬಲೂನ್ ಅನಾವರಣ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ಹಂಚಿಕೆ ಮಾಡಿಸಲಾಗುತ್ತದೆ ಹಾಗೂ ಮತದಾನ ಮಾರ್ಗದರ್ಶಿಗಳಿಂದ ಅವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಚುನಾವಣೆಯನ್ನು ಯಶಸ್ವಿಗೊಳಿಸಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೆಸ್ಕಾಂನವರು ನಮ್ಮೊಂದಿಗೆ ಸೇರಿ ತಮ್ಮ ಸಿಬ್ಬಂದಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ತಲುಪುವಂತೆ ಮಾಡಬೇಕು. ಆಗ ಮಾತ್ರವೇ ನಮ್ಮ ಉದ್ದೇಶ ಸಫಲವಾಗುವುದು ಎಂದರು.

ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣೆಯನ್ನು ಯಶಸ್ವಿಯಾಗಿಸಲು ಗ್ರಾಮ, ತಾಲೂಕು ಹಾಗೂ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರಲ್ಲಿ ನೈತಿಕ ಮತದಾನ ಮಾಡಲು ಪ್ರೇರೇಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಮಾತನಾಡಿ, ಹಿಂದೆಂದೂ ಆಗಿರದಷ್ಟು ಮತದಾನವನ್ನು ಈ ಬಾರಿಯ ಚುನಾವಣೆಯಲ್ಲಿ ಆಗುವಂತೆ ಮಾಡಬೇಕು. ಅದು ಹೇಗೆ ಎಂದರೆ ದಿನದ 24 ಗಂಟೆಗಳು ಜನರ ಮುಂದೆ ಮತದಾನದ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅವರಿಗೂ ಮತದಾನ ಮಾಡಲೇಬೇಕೆಂಬ ಮನೋಭಾವ ಉಂಟಾಗುತ್ತದೆ. ಇದರಿಂದ ಮತದಾನ ಹೆಚ್ಚಳದ ಉದ್ದೇಶ ಸಫಲವಾಗುತ್ತದೆ ಎಂದರು.

ಕನ್ನಡದ ಚಲನಚಿತ್ರ ನಟರಾದ ಜಿಮ್ ರವಿ ನವರು ಮಾತನಾಡಿ, ಮತದಾನ ಎಂಬುದು ಒಂದು ಹಬ್ಬದ ಹಾಗೆ ಇದರಲ್ಲಿ ಎಲ್ಲರೂ ನೈತಿಕವಾಗಿ ಭಾಗವಹಿಸಬೇಕು. ಸದೃಢ ದೇಹಬೇಕೆಂದರೆ ಪ್ರತಿನಿತ್ಯವು ವ್ಯಾಯಾಮ ಮಾಡಬೇಕು ಅದೇ ರೀತಿಯಾಗಿ ದೇಶವನ್ನು ಅಭಿವೃದ್ಧಿಗೊಳಿಸಲು ಉತ್ತಮ ನಾಯಕನ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಚುನಾವಣೆಯ ದಿನದಂದು ರಜಾ ದಿನ ಎಂದು ಭಾವಿಸುತ್ತಾರೆ ಆದರೆ ಅದು ತಪ್ಪು ಮತದಾನ ನಮ್ಮೆಲ್ಲರ ಹಕ್ಕು ಆ ದಿನದಂದು ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಬೇಕು ಎಂದರು.

ಮತದಾರರು ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೆ ನೈತಿಕವಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ಈ ಬಾರಿ ಮೈಸೂರಿನಲ್ಲಿ ಶೇಕಡ ನೂರಕ್ಕೆ ನೂರರಷ್ಟು ಮತದಾನ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆಎಂ ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಮಹಾನಗರ ಪಾಲಿಕೆಯ ಆಯುಕ್ತರಾದ ಎನ್ ಎನ್ ಮಧು ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನಚಿಕ್ಕಮಗಳೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ
ಮುಂದಿನ ಲೇಖನಮೈಸೂರು: ಮತದಾನ ಜಾಗೃತಿಗೆ ನಮ್ಮ ನಡೆ, ಮತಗಟ್ಟೆಯ ಕಡೆ