ಮಂಡ್ಯ (Mandya)- ಮೇಲುಕೋಟೆಯಲ್ಲಿ ದೀವಟಿಗೆ ಸಲಾಂ ಬದಲಿಗೆ `ಸಂಧ್ಯಾರತಿ’ಎಂದು ಮರುನಾಮಕರಣ ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಶಿಫಾರಸು ಮಾಡಿದ್ದಾರೆ.
ಸಂಧ್ಯಾರತಿ ಎಂದು ಬದಲಿಸುವಂತೆ ಡಿಸಿಗೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಮುಜರಾಯಿ ಆಯುಕ್ತರಿಗೆ ಡಿಸಿ ಪತ್ರ ಬರೆದಿದ್ದಾರೆ. ದೀವಟಿಗೆ ಸಲಾಂ ಬದಲಿಗೆ ಸಂಧ್ಯಾರತಿ ಎಂದು ಉಲ್ಲೇಖಿಸಿ ಮುಂದಿನ ಆದೇಶಕ್ಕೆ ಡಿಸಿ ಮನವಿ ಮಾಡಿದ್ದಾರೆ. ಸದ್ಯ ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ ಒಂದೇ ಬಾಕಿ ಇದೆ.
ಹೆಸರು ಬದಲಿಸುವಂತೆ ಮುಜರಾಯಿ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ನಡೆಯುತ್ತಿದೆ. ದೀವಟಿಗೆ ಸಲಾಂ ಆರತಿ ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಎಂಬವರು ಮಂಡ್ಯ ಡಿಸಿಗೆ ಮನವಿ ಮಾಡಿದ್ದರು.
ಮನವಿ ಬಳಿಕ ವರದಿ ನೀಡುವಂತೆ ದೇವಾಲಯ ಇಒ ಹಾಗೂ ಪಾಂಡವಪುರ ಎಸಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ದೇವಾಲಯ ಅರ್ಚಕರು, ಸ್ಥಾನಿಕರು ಹಾಗೂ ಪರಿಚಾರಕರ ಸಮ್ಮುಖದಲ್ಲಿ ಈ ಕುರಿತು ಸಭೆ ನಡೆದಿದ್ದು, ಸಭೆಯಲ್ಲಿ ಸಲಾಂ ಹೆಸರು ಬದಲಾಯಿಸಿ ಸಂಧ್ಯಾರತಿ ಎಂದು ಕರೆಯುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಅಧಿಕಾರಿಗಳ ಮುಂದೆ ದೇವಾಲಯ ಸ್ಥಾನಿಕರು ಹಾಗೂ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.