ಮನೆ ರಾಜಕೀಯ ಡಿಕೆಶಿ, ಸಿದ್ದರಾಮಯ್ಯ ಈಗಲೂ ಉತ್ತರ – ದಕ್ಷಿಣದಂತೆಯೇ ಇದ್ದಾರೆ: ಡಾ.ಕೆ.ಸುಧಾಕರ್

ಡಿಕೆಶಿ, ಸಿದ್ದರಾಮಯ್ಯ ಈಗಲೂ ಉತ್ತರ – ದಕ್ಷಿಣದಂತೆಯೇ ಇದ್ದಾರೆ: ಡಾ.ಕೆ.ಸುಧಾಕರ್

0

ಮೈಸೂರು(Mysuru): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಯಾವಾಗಲೂ ಉತ್ತರ – ದಕ್ಷಿಣದಂತೆಯೇ ಇದ್ದಾರೆ.‌ ಅದಕ್ಕಾಗಿಯೇ ಪ್ರತ್ಯೇಕವಾಗಿ ಚುನಾವಣಾ ಪ್ರವಾಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು.

ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪಾದಯಾತ್ರೆಗಳು ನಡೆಯುವುದು ಸಾಮಾನ್ಯ. ಜನರ ಕಷ್ಟಕ್ಕೆ ಯಾವ ಸಮಯದಲ್ಲಿ, ಯಾರು ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದಾರೆ. ಜನರು ಬುದ್ಧಿವಂತರು. ಸರಿಯಾದ ಸಮಯದಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಜೆಡಿಎಸ್, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಶಾಸಕರಲ್ಲಿ ಯಾರೂ ವಾಪಸ್ ಹೋಗುವುದಿಲ್ಲ. ಕಾಂಗ್ರೆಸ್‌ಗೆ ಹೋಗುವ ಮಾಹಿತಿಯೂ ಇಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರು, ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಕೂಡ ಹೋಗುವುದಿಲ್ಲ. ಪಕ್ಷ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ಕಾಂಗ್ರೆಸ್ ಬಿಡುವಾಗ ಯಾವ ಕಾರಣಕ್ಕಾಗಿ, ಏನಾಯಿತು ಎಂಬುದನ್ನು ಅವರೇ ಹೇಳಿರುವುದರಿಂದಾಗಿ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ ಎಂದು ‌ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ, ಬಹುವಚನ ಬಳಸುವುದನ್ನು ಮಾತ್ರ ಕಲಿಯಲಿಲ್ಲ. ಹಿರಿಯರಾದ ಅವರು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಕ್ಕೆ ನನಗೇನೂ ಬೇಜಾರಿಲ್ಲ. ಅವರು ಹಾಗೆ ಮಾತನಾಡುವುದರಲ್ಲಿ ವಿಶೇಷವೇನಿಲ್ಲ ಎಂದು ತಿರುಗೇಟು ನೀಡಿದರು.

ಓಮೈಕ್ರಾನ್ ತಳಿ ಪತ್ತೆಯಾಗಿಲ್ಲ: ಮಹಾರಾಷ್ಟ್ರದಲ್ಲಿ ಒಂದು ಓಮೈಕ್ರಾನ್ ತಳಿ ದೃಢಪಟ್ಟಿರುವ ಪ್ರಕರಣ ಪತ್ತೆಯಾಗಿದೆ. ಆದರೆ ಕರ್ನಾಟಕದಲ್ಲಿ ಆ ರೂಪಾಂತರಿ ತಳಿ ಪತ್ತೆಯಾಗಿಲ್ಲ. ಹೀಗಿದ್ದರೂ ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ನೀಡಿದ್ದೇವೆ. ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡುವ ಸಂದರ್ಭ ಬಂದಿಲ್ಲ. ಕೋವಿಡ್ ಲಸಿಕೆ ನೀಡಿಕೆಯಲ್ಲಿ (1ನೇ ಹಾಗೂ 2ನೇ ಡೋಸ್) ಶೇ 100ರಷ್ಟು ಗಡಿ ದಾಟಿದೆ. ಎಲ್ಲರೂ ಮೂರನೇ ಡೋಸ್ ಹಾಕಿಸಿಕೊಳ್ಳಬೇಕು ಎಂದು ಕೋರಿದರು.

ಹಿರಿಯ ಹಾಗೂ ಕಿರಿಯ ನರ್ಸಿಂಗ್ ಸಿಬ್ಬಂದಿ ನೇಮಕಾತಿಯನ್ನು ವಾರದಲ್ಲಿ ಮಾಡಲಾಗುತ್ತದೆ. ಖಾಲಿ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ‌ ಎಂದರು.