ಬೆಂಗಳೂರು(Bengaluru): ಕನಕಪುರ ಸಮೀಪ ಅರ್ಕಾವತಿ ನದಿಗೆ ಪರ್ಯಾಯ ಸೇತುವೆ ನಿರ್ಮಾಣ ಹಾಗೂ ಕನಕಪುರ ನಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.
ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಳೆಯ ಸೇತುವೆ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆ ವಿವರಿಸಿ, ಈಗಿರುವ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಾಗೆಯೇ ಮೊನ್ನೆ ಸುರಿದ ಮಳೆಯಿಂದಾಗಿ ಬೆಂಗಳೂರು ಮೈಸೂರು ರಸ್ತೆಗಳು ಹಾಳಾಗಿವೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಭಾಗದಲ್ಲಿ ರಸ್ತೆಗಳೂ ಜಲಾವೃತವಾಗಿವೆ. ರಾಮನಗರ, ಚನ್ನಪಟ್ಟಣ, ಕನಕಪುರ ಭಾಗದ ಜನ ಇದೇ ರಸ್ತೆಯನ್ನು ಆಶ್ರಯಿಸಿರುವ ಕಾರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಕೋರಿದ್ದಾರೆ.
ಈ ಸಂದರ್ಭ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಉಪಸ್ಥಿತರಿದ್ದರು.