ಮನೆ ರಾಜ್ಯ ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಿ: ಸಾಗರ ವಿಜ್ಞಾನ ತಜ್ಞ ಡಾ.ವಿ.ಎನ್‌. ನಾಯಕ್‌

ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಿ: ಸಾಗರ ವಿಜ್ಞಾನ ತಜ್ಞ ಡಾ.ವಿ.ಎನ್‌. ನಾಯಕ್‌

0

ಮೈಸೂರು(Mysuru): ಪ್ಲಾಸ್ಟಿಕ್‌ ಉಪಯೋಗವನ್ನು ನಿಲ್ಲಿಸಬೇಕು. ಭೂಮಿ ಮೇಲಿನ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು. ಸಮುದ್ರ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ, ಸಾಗರ ವಿಜ್ಞಾನ ತಜ್ಞ ಡಾ.ವಿ.ಎನ್‌. ನಾಯಕ್‌ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕರ್ನಾಟಕ ಮುಕ್ತ ವಿವಿ, ಮೈಸೂರು ವಿಶ್ವವಿದ್ಯಾಲಯದಿಂದ ಆಯೋಜಿಸಿರುವ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಎರಡನೇ ದಿನವಾದ ಶುಕ್ರವಾರ ‘ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ’ ಕುರಿತು ವಿಷಯ ಮಂಡಿಸಿದರು.

ಜಗತ್ತಿನಲ್ಲಿ ಬಳಸುವ ಪ್ಲಾಸ್ಟಿಕ್‌ನಲ್ಲಿ ಶೇ 50ರಷ್ಟು ಏಕಬಳಕೆ ಪ್ಲಾಸ್ಟಿಕ್‌ ಸೇರಿದೆ. ಪ್ರತಿ ವ್ಯಕ್ತಿ 10 ವರ್ಷಗಳಲ್ಲಿ 2.5 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಸೇವಿಸುತ್ತಾನೆ ಪ್ಲಾಸ್ಟಿಕ್‌ ಬಳಕೆ ಅನಿವಾರ್ಯ ಎನ್ನುವಂತಾಗಿದೆ. ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದ್ದರೂ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಇನ್ನೂ ಮಾಡಿಕೊಂಡಿಲ್ಲ ಎಂದು ತಿಳಿಸಿದರು.

ಭೂಮಿಗಿಂತ ಸಾಗರದಲ್ಲಿರುವ ಜೀವಿಗಳ ಪ್ರಮಾಣ ಹೆಚ್ಚು. ಪ್ಲಾಸ್ಟಿಕ್‌ ಬಳಕೆ ಹೆಚ್ಚಿದಂತೆಲ್ಲಾ ಸಾಗರದ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲ್ಲೋ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ತ್ಯಾಜ್ಯ ಕಾಲಾನಂತರದಲ್ಲಿ ಸಮುದ್ರ ಸೇರುತ್ತದೆ. ಈ ತ್ಯಾಜ್ಯವು ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ಮೀನುಗಾರಿಕೆ ಮೇಲೂ ಪರಿಣಾಮ ಬೀರುತ್ತಿದೆ. ಸಮುದ್ರದಿಂದ ಜನ್ಮಿಸಿದ ಮನುಷ್ಯ ಸಮುದ್ರವನ್ನೇ ಹಾಳು ಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಸಂದರ್ಭದಲ್ಲಿ ಮಾಸ್ಕ್‌, ಕೈಗವಸು ಸೇರಿದಂತೆ ವೈದ್ಯಕೀಯ ತ್ಯಾಜ್ಯ ವ್ಯಾಪಕ ಪ್ರಮಾಣದಲ್ಲಿ ಉತ್ಪತ್ತಿಯಾಗಿದ್ದು, ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ ಎಂದರು.

ಮುಂದಿನ 20ರಿಂದ 30 ವರ್ಷಗಳಲ್ಲಿ ಭೂಮಿಯ ಎಲ್ಲೆಡೆ ಸೂಕ್ಷ್ಮ ಪ್ಲಾಸ್ಟಿಕ್‌ ಹರಡಿರುತ್ತದೆ. ಕಣ್ಣಿಗೆ ಕಾಣದಂತಹ ಪ್ಲಾಸ್ಟಿಕ್‌ ನಮ್ಮ ದೇಹ ಸೇರಿ ವಿವಿಧ ಕಾಯಿಲೆಗಳಿಗೆ ಕಾರಣವಾಗಲಿದೆ. ಜಗತ್ತಿನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪ್ರತಿ ವರ್ಷ 1 ಲಕ್ಷ ಪ್ರಾಣಿಗಳು, 10 ಲಕ್ಷ ಪಕ್ಷಿಗಳು ಸಾಯುತ್ತಿವೆ. ಕಡಲಾಮೆ ಮರಿಗಳು ಪ್ಲಾಸ್ಟಿಕ್‌ ಸೇವಿಸಿ ಮೃತಪಡುತ್ತಿವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ರಾಜೀವ್‌ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ್‌, ಜಿಲ್ಲಾ ಸಮಿತಿ ಸದಸ್ಯ ಎಚ್‌.ಎಲ್‌.ಚಲುವರಾಜು, ಕೃಷ್ಣ ಚೈತನ್ಯ ಇದ್ದರು.

ಹಿಂದಿನ ಲೇಖನಕನಕಪುರ ನಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ನಿತಿನ್ ಗಡ್ಕರಿಗೆ ಡಿಕೆಶಿ ಮನವಿ
ಮುಂದಿನ ಲೇಖನಎದ್ದೇಳು ಮಂಜುನಾಥ