ಮೈಸೂರು: ಅತಿ ಕಡಿಮೆ ದರದಲ್ಲಿ ಔಷಧಿಗಳನ್ನು ಲಭ್ಯವಾಗಿಸುವ ಜನ ಔಷಧಿ ಕೇಂದ್ರಗಳನ್ನು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮಾತ್ರವಲ್ಲದೆ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪಕೇಂದ್ರಗಳಲ್ಲೂ ಆರಂಭಿಸುವ ಗುರಿ ಇದೆ. ಆರು ತಿಂಗಳಲ್ಲಿ ಹೊಸ 500 ಜನ ಔಷಧಿ ಕೇಂದ್ರಗಳನ್ನು ನಿರ್ಮಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯ ಖಾಸಗಿ ಹೋಟೆಲ್ ನಲ್ಲಿ ಜನ ಔಷಧಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಮೊದಲು ಫಲಾನುಭವಿಗಳು ಹಾಗೂ ಕೇಂದ್ರಗಳ ಮಾಲೀಕರನ್ನುದ್ದೇಶಿಸಿ ಮಾತನಾಡಿದರು.
ಕಳೆದ 68 ವರ್ಷಗಳಲ್ಲಿ ಯಾರಿಗೂ ಔಷಧಿಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಬಂದಿರಲಿಲ್ಲ ಎಂಬುದು ಸೋಜಿಗದ ಸಂಗತಿ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ಷ್ಮ ವಿಚಾರಗಳ ಬಗ್ಗೆ ಚಿಂತನೆ ಮಾಡಿ, ಬದ್ಧತೆಯಿಂದ ಜನ ಔಷಧಿ ಯೋಜನೆಯನ್ನು ಬಲಗೊಳಿಸಿದರು. ಪ್ರಸ್ತುತ ದೇಶದಲ್ಲಿ 8 ಸಾವಿರಕ್ಕೂ ಅಧಿಕ ಹಾಗೂ ರಾಜ್ಯದಲ್ಲಿ 952 ಜನ ಔಷಧಿ ಕೇಂದ್ರಗಳಿವೆ. ಇದರೊಂದಿಗೆ ಅತಿ ಹೆಚ್ಚು ಕೇಂದ್ರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳಲ್ಲಿ ಸುಮಾರು 500 ಹೊಸ ಕೇಂದ್ರಗಳನ್ನು ನಿರ್ಮಿಸುವ ಗುರಿಯನ್ನೂ ಇರಿಸಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮಾತ್ರವಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪಕೇಂದ್ರಗಳಲ್ಲೂ ಇದನ್ನು ನಿರ್ಮಿಸಬೇಕೆಂಬ ಗುರಿ ಇದೆ. ಈ ಗುರಿ ಸಾಧಿಸುವುದರೊಂದಿಗೆ ಕರ್ನಾಟಕ ಮೊದಲ ಸ್ಥಾನಕ್ಕೇರಲಿದೆ ಎಂದು ತಿಳಿಸಿದರು.
ಖಾಸಗಿ ಜಾಗಗಳಲ್ಲೂ ಹೆಚ್ಚು ಜನ ಔಷಧಿ ಕೇಂದ್ರಗಳನ್ನು ಆರಂಭಿಸಿ, ಹೆಚ್ಚು ಜನರನ್ನು ತಲುಪುವಂತಾಗಬೇಕು. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮೂತ್ರಪಿಂಡ ಸಂಬಂಧಿ ಸಮಸ್ಯೆ ಸೇರಿದಂತೆ ಅನೇಕ ಅನಾರೋಗ್ಯಗಳನ್ನು ನಿವಾರಿಸುವ ಔಷಧಿಗಳು ಮಾರುಕಟ್ಟೆಯಲ್ಲಿದೆ. ಆದರೆ ಅವುಗಳ ದರ ಅತಿ ಹೆಚ್ಚಾಗಿದೆ. ಸಾಮಾನ್ಯ ಜನರು ತಮ್ಮ ಸಂಬಳದಲ್ಲಿ 30%-40% ನಷ್ಟು ಮೊತ್ತವನ್ನು ಔಷಧಿ ಖರೀದಿಗೆ ಬಳಸುತ್ತಿದ್ದಾರೆ. ಇದನ್ನು ಗಮನಿಸಿಯೇ ಶೇ.70-80 ರಷ್ಟು ಕಡಿಮೆ ದರದಲ್ಲಿ ಔಷಧಿಗಳನ್ನು ನೀಡಲಾಗುತ್ತಿದೆ. ಬ್ರ್ಯಾಂಡೆಡ್ ನಂತೆಯೇ ಗುಣಮಟ್ಟದ ಔಷಧಿಗಳು ಇಲ್ಲಿ ಲಭ್ಯವಿದೆ. ಅದನ್ನು ತಯಾರಿಸಿ ಪರೀಕ್ಷೆಗೆ ಒಳಪಡಿಸಿಯೇ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಜನ ಔಷಧಿ ಕೇಂದ್ರಗಳ ಔಷಧಿಗಳ ಬಗ್ಗೆ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ವೈದ್ಯರಿಗೆ ಮನವಿ:
ಜನ ಔಷಧಿ ಕೇಂದ್ರಗಳ ಬಗ್ಗೆ ಜನರು ವಿಶ್ವಾಸ ಇರಿಸಿಕೊಳ್ಳಬೇಕು. ಒಂದು ರೂಪಾಯಿ ಮೌಲ್ಯದ ಔಷಧಿ ಕೇವಲ 20 ಪೈಸೆಗೆ ದೊರೆಯುವಂತಹ ಸೌಲಭ್ಯ ಇಲ್ಲಿದೆ. ಖಾಸಗಿ ಆರೋಗ್ಯ ವಲಯದಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಬಡ ಜನರಿಗಾಗಿ ಔಷಧಿ ಬರೆದುಕೊಡುವಾಗ ಬ್ರ್ಯಾಂಡೆಡ್ ಔಷಧಿಗಳ ಹೆಸರು ಬರೆಯಬೇಡಿ. ಜನರ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ರಾಸಾಯನಿಕವಾದ ಹೆಸರು ನಮೂದಿಸಬೇಕು. ಮಾನವೀಯತೆಯ ದೃಷ್ಟಿಯಿಂದ ವೈದ್ಯರು ಜನ ಔಷಧಿ ಮಳಿಗೆಗಳಿಗೆ ಔಷಧಿ ಖರೀದಿಗೆ ಶಿಫಾರಸು ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ಉಪಸ್ಥಿತರಿದ್ದರು.