ಮನೆ ಕಾನೂನು ಮಲಯಾಳಂ ಸುದ್ದಿವಾಹಿನಿ ಅರ್ಜಿ ವಿಚಾರಣೆಗೆ ಸುಪ್ರೀಂಕೊರ್ಟ್ ಸಮ್ಮತಿ

ಮಲಯಾಳಂ ಸುದ್ದಿವಾಹಿನಿ ಅರ್ಜಿ ವಿಚಾರಣೆಗೆ ಸುಪ್ರೀಂಕೊರ್ಟ್ ಸಮ್ಮತಿ

0

ನವದೆಹಲಿ: ಭದ್ರತೆ ಕಾರಣಕ್ಕೆ ಮಲಯಾಳ ಸುದ್ದಿ ವಾಹಿನಿ ’ಮೀಡಿಯಾ ಒನ್’ ಪ್ರಸಾರದ ಮೇಲೆ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧವನ್ನು ಎತ್ತಿಹಿಡಿದಿರುವ ಕೇರಳ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.

ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾ. ಎ.ಎಸ್ ಬೋಪಣ್ಣ ಅವರಿದ್ದ ಪೀಠವು, ಈ ಕುರಿತ ಅರ್ಜಿಯನ್ನು ಮಾ.10ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಮೊದಲಿಗೆ ಈ ಅರ್ಜಿ ವಿಚಾರಣೆಯನ್ನು ಮಾ.11ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು. ಆದರೆ, ಅಂದು ತಮಗೆ ಕೆಲಸವಿದೆ ಎಂದು ವಕೀಲ ದುಶ್ಯಂತ್ ದವೆ ಅವರು ಹೇಳಿದ ಹಿನ್ನೆಲೆಯಲ್ಲಿ ಮಾ.10ರಂದು ವಿಚಾರಣೆ ನಡೆಸಲು ಪೀಠ ಒಪ್ಪಿದೆ. ಈ ಬಗ್ಗೆ ಸೋಮವಾರ ಮಲಯಾಳ ಸುದ್ದಿ ವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಅವರು, ’ನಮ್ಮ ಸುದ್ದಿ ವಾಹಿನಿಯು ಕಳೆದ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, 350 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಅಲ್ಲದೆ ಸಾವಿರಾರು ಮಂದಿ ವೀಕ್ಷಕರಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸುದ್ದಿವಾಹಿನಿಯನ್ನು ಮುಚ್ಚಿಸಿದೆ. ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠ ಮತ್ತು ವಿಭಾಗೀಯ ಪೀಠ ಸುದ್ದಿ ಸಂಸ್ಥೆ ಮೇಲೆ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿವೆ. ಮಾಹಿತಿ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯದ ಹಕ್ಕುಗಳಿಗೆ ಸಂಬಂಧಿಸಿದ ಇದು ಗಂಭೀರ ವಿಚಾರ’ ಎಂದು ಹೇಳಿದರು.

ವಿವಿಧ ತನಿಖಾ ಸಂಸ್ಥೆಗಳ ಗುಪ್ತಚರ ಮಾಹಿತಿ ಆಧರಿಸಿ ಸುದ್ದಿ ಸಂಸ್ಥೆ ಮೇಲೆ ಭದ್ರತಾ ಕ್ಲಿಯರೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆ ನಿರಾಕರಿಸಿತ್ತು. ಇದನ್ನು ಕೇರಳ ಹೈಕೋರ್ಟ್ ಸಮರ್ಥಿಸಿಕೊಂಡಿತ್ತು. ಈ ತೀರ್ಪಿನ ವಿರುದ್ಧ ಈಗ ಮಾಧ್ಯಮ ಸಂಸ್ಥೆ ಸಪ್ರೀಂ ಕೋರ್ಟ್ ಮೊರೆ ಹೋಗಿದೆ.

ಹಿಂದಿನ ಲೇಖನವೈದ್ಯರು, ಬಡ ರೋಗಿಗಳಿಗೆ ದುಬಾರಿ ಬ್ರ್ಯಾಂಡೆಡ್ ಔಷಧಿ ಖರೀದಿಗೆ ಸೂಚಿಸಬೇಡಿ: ಸಚಿವ ಡಾ.ಕೆ.ಸುಧಾಕರ್
ಮುಂದಿನ ಲೇಖನರಾಜ್ಯಸಭೆಯ 13 ಸ್ಥಾನಗಳಿಗೆ ಮಾ.31 ರಂದು ಚುನಾವಣೆ