ನವದೆಹಲಿ: ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ವಿರುದ್ಧ ಮನೆಗಳ ಮೇಲಿನ ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ (ಸೆ.02) ಒಂದು ವೇಳೆ ವ್ಯಕ್ತಿಯನ್ನು ಅಪರಾಧಿ ಎಂದು ಆದೇಶ ನೀಡುವ ಮೊದಲು ಮನೆಯನ್ನು ನೆಲಸಮಗೊಳಿಸಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಕೇವಲ ಆರೋಪಿಯಾದ ಮಾತ್ರಕ್ಕೆ ಮನೆಯನ್ನು ಹೇಗೆ ಧ್ವಂಸಗೊಳಿಸಿದಿರಿ? ಒಂದು ವೇಳೆ ಅಪರಾಧಿ ಎಂದು ಆದೇಶ ನೀಡುವವರೆಗೆ ಮನೆ ಧ್ವಂಸಗೊಳಿಸುವಂತಿಲ್ಲ. ನಾವು ಈ ಬಗ್ಗೆ ಮೌಖಿಕವಾಗಿ ಹೇಳಿದ್ದರೂ ಕೂಡಾ, ಸರ್ಕಾರದ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಎಂದು ಜಮಿಯತ್ ಇ ಹಿಂದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಬಿಆರ್ ಗವಾಯಿ ಈ ರೀತಿ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
“ಯಾರೂ ಕೂಡಾ ಲೋಪದೋಷದ ಲಾಭವನ್ನು ಪಡೆದುಕೊಳ್ಳಬಾರದು. ತಂದೆಯೊಬ್ಬನಿಗೆ ಅಶಿಸ್ತಿನ ಮಗನಿರಬಹುದು, ಆದರೆ ಈ ನೆಲದಲ್ಲಿ ಒಂದು ವೇಳೆ ಮನೆಯನ್ನು ಧ್ವಂಸಗೊಳಿಸುದೆಂದರೆ ಇದು ಸೂಕ್ತವಾದ ಮಾರ್ಗವಲ್ಲ ಎಂದು ಜಸ್ಟೀಸ್ ಕೆ.ವಿ.ವಿಶ್ವನಾಥನ್ ಅರ್ಜಿ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಗರಪಾಲಿಕೆಯ ಕಾನೂನು ಉಲ್ಲಂಘಿಸಿದ ಆಧಾರದ ಮೇಲೆ ಮನೆಗಳನ್ನು ಧ್ವಂಸಗೊಳಿಸಿರುವುದಾಗಿ ವಾದ ಮಂಡಿಸಿದ್ದರು.
ಆದರೆ ದೂರುಗಳನ್ನು ಗಮನಿಸಿದರೆ ಅಲ್ಲಿಯೂ ಉಲ್ಲಂಘನೆ ಕಂಡು ಬರುತ್ತಿದೆ. ಕಾನೂನು ಪ್ರಕಾರ ಅಂತ ಹೇಳಿದರೂ ಕೂಡಾ ಇಲ್ಲಿ ಅದನ್ನೂ ಉಲ್ಲಂಘಿಸಲಾಗಿದೆ ಎಂದು ಸುಪ್ರೀಂ ಪೀಠ ತಿಳಿಸಿದ್ದು, ಸೆಪ್ಟೆಂಬರ್ 17ರಂದು ಅರ್ಜಿ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದೆ.