ಬೆಂಗಳೂರು (Bengaluru)-ವೈದ್ಯರೊಬ್ಬರನ್ನು ಹನಿಟ್ರ್ಯಾಪ್ (Honey Trap) ಜಾಲಕ್ಕೆ ಸಿಲುಕಿಸಿ 50 ಲಕ್ಷ ರೂ. ಪಡೆದು ವಂಚಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ನಾಗರಾಜ್ ಸಿದ್ದಣ್ಣ, ಮಧು ಸೇರಿ ಮೂವರನ್ನು ಬಂಧಿಸಲಾಗಿದೆ. ಕಲಬುರಗಿಯ ಮೆಂತನಗಲ್ಲಿಯ ವೈದ್ಯರೊಬ್ಬರು ತಮ್ಮ ಊರಿನಲ್ಲೇ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಎರಡನೇ ಪುತ್ರ ಪಿಯುಸಿಯಲ್ಲಿ ಶೇ. 80 ರಷ್ಟು ಅಂಕ ಪಡೆದಿದ್ದ. ಹಾಗಾಗಿ, ತನ್ನ ಪುತ್ರನನ್ನು ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೇರಿಸುವ ಕನಸು ಹೊಂದಿದ್ದರು. ಅದಕ್ಕೆ ಕಾಲೇಜಿನಲ್ಲಿ ಸೀಟು ಕೊಡಿಸುವಂತೆ ಪರಿಚಯಸ್ಥರನ್ನೆಲ್ಲ ಕೇಳಿಕೊಂಡಿದ್ದರು.
ಈ ಮಧ್ಯೆ, ವೈದ್ಯರು ಮೆಡಿಕಲ್ ಸೀಟ್‌ಗಾಗಿ ಓಡಾಡುತ್ತಿರುವುದು ತಿಳಿದ 8 ವರ್ಷಗಳಿಂದ ಪರಿಚಯವಿದ್ದ ನಾಗರಾಜ್ ತಾನು ಸೀಟ್ ಕೊಡಿಸುವುದಾಗಿ ಭರವಸೆ ನೀಡಿದ್ದ. ಸೀಟ್ ಕೊಡಿಸುವ ಸಲುವಾಗಿ 2021ರ ಫೆಬ್ರವರಿಯಿಂದ ಮಾರ್ಚ್‌ವರೆಗೆ ಹಂತ-ಹಂತವಾಗಿ 66 ಲಕ್ಷ ರೂ. ಪಡೆದುಕೊಂಡಿದ್ದ. ವರ್ಷ ಕಳೆದರೂ ತನ್ನ ಮಗನಿಗೆ ಎಂಬಿಬಿಎಸ್ ಸೀಟ್ ಕೊಡಿಸದಿದ್ದಾಗ ವೈದ್ಯರು ಹಣ ವಾಪಸ್ ಕೇಳಿದ್ದಾರೆ.
ಆರೋಪಿ ನಾಗರಾಜ್ ಹಣ ವಾಪಸ್ ಕೊಡುವುದಾಗಿ 2022ರ ಜನವರಿಯಲ್ಲಿ ವೈದ್ಯರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಮಧು ಎಂಬವನ ಮೂಲಕ ಮೆಜೆಸ್ಟಿಕ್‌ನ ಯು.ಟಿ. ಲಾಡ್ಜ್‌ನಲ್ಲಿ ರೂಂ ಕಾಯ್ದಿಸಿದ್ದ ನಾಗರಾಜ್, ವೈದ್ಯರನ್ನು ಅಲ್ಲೇ ಉಳಿಸಿದ್ದ. ತಾನು ಮತ್ತೊಂದು ಕೊಠಡಿಯಲ್ಲಿ ತಂಗಿದ್ದ. ಅಂದು ತಡರಾತ್ರಿ 3 ಗಂಟೆಗೆ ರೂಂ ಬಾಗಿಲು ಬಡಿಯುವ ಶಬ್ದ ಕೇಳಿದ ವೈದ್ಯರು, ಬಾಗಿಲು ತೆರೆದ ಕೂಡಲೇ ಇಬ್ಬರು ಯುವತಿಯರು ಒಳಗೆ ನುಗ್ಗಿ ವೈದ್ಯರು ಮಲಗಿದ್ದ ಮಂಚದ ಮೇಲೆ ಮಲಗುತ್ತಾರೆ. ಕೂಡಲೇ ಪೊಲೀಸ್ ದಿರಿಸಿನಲ್ಲಿದ್ದ ಮೂವರು ಅಪರಿಚತರು ಕೊಠಡಿಯೊಳಗೆ ನುಗ್ಗಿ ಲಾಡ್ಜ್ ರೇಡ್ ಮಾಡಲಾಗಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದ್ದರು.
ಗಲಾಟೆ ಶಬ್ದದ ಬಳಿಕ ರೂಂನೊಳಗೆ ಬಂದ ನಾಗರಾಜ್ ಹುಡುಗಿಯರನ್ನು ವೈದ್ಯರ ಪಕ್ಕದಲ್ಲಿ ನಿಲ್ಲಿಸಿ ಪೋಟೊ ತೆಗೆಸಿದ್ದ. ಮೂವರು ಅಪರಿಚಿತರು ವೈದ್ಯರ ಬಳಿಯಿದ್ದ ಚಿನ್ನದ ಸರ, ಉಂಗುರ, 35 ಸಾವಿರ ರೂ. ನಗದು ಕಸಿದುಕೊಂಡಿದ್ದರು. ಬಳಿಕ ನಾಗರಾಜ್, ಓಂ ಪ್ರಕಾಶ್ ಎಂಬುವರನ್ನು ಲಾಡ್ಜ್ ಬಳಿ ಕರೆಸಿದ್ದ. ತಾನು ಪೊಲೀಸರ ಜತೆ ಮಾತಾನಾಡಿರುವುದಾಗಿ ಹೇಳಿದ್ದ ಓಂ ಪ್ರಕಾಶ್, 50 ಲಕ್ಷ ರೂ. ನೀಡಿದರೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸುತ್ತಾರೆ ಎಂದು ವೈದ್ಯರಿಗೆ ಹೇಳಿದ್ದ. ಸದ್ಯಕ್ಕೆ ಹಣವಿಲ್ಲ, ಊರಿಗೆ ತೆರಳಿ ಹಣ ನೀಡುವುದಾಗಿ ವೈದ್ಯರು ತಿಳಿಸಿದ್ದರು.
ಬಳಿಕ ಕಲುಬುರಗಿಗೆ ತೆರಳಿದ ವೈದ್ಯರು ತಮ್ಮ ಮನೆಯ ಆಧಾರ ಪತ್ರಗಳನ್ನು ಕೋ ಆಪರೇಟಿವ್ ಸೊಸೈಟಿಯಲ್ಲಿಟ್ಟು 50 ಲಕ್ಷ ರೂ. ಹಣ ಸಾಲ ಪಡೆದುಕೊಂಡಿದ್ದರು. ಬಳಿಕ ಕಾರಿನ ಚಾಲಕ ಸಿದ್ದರಾಮನ ಜತೆ ತೆರಳಿ ಕಲುಬುರಗಿಯ ಎಸ್‌ಪಿ ಕಚೇರಿಯ ಬಳಿಗೆ ಬಂದಿದ್ದ ನಾಗರಾಜ್‌ಗೆ ವೈದ್ಯರು ಹಣ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಆ ಯುವತಿಯರಿಗೆ ಜಾಮೀನು ಕೊಡಿಸಲು 20 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದ ವೈದ್ಯರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಉಪ್ಪಾರಪೇಟೆ ಪೊಲೀಸರು ಬಳಿಕ ಸಿಸಿಬಿ ಪೊಲೀಸರಿಗೆ ಪ್ರಕರಣ ವರ್ಗಾಯಿಸಿದ್ದರು. ಇದೀಗ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.