ಮೈಸೂರು(Mysuru): ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗಬೇಡಿ, ಒಳ್ಳೆಯ ವಿಧ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್ ಮಂಜುನಾಥ್ ಸ್ವಾಮಿ ಅವರು ಸಲಹೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾರಾಜ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಮಹಾರಾಜ ಕಾಲೇಜು ಜೂನಿಯರ್ ಬಿಎ ಹಾಲ್‌ನಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಂತ ಶಿವಯೋಗಿಗಳು ಹಳ್ಳಿ ಹಳ್ಳಿಗೆ ಹೋಗಿ ದುಶ್ಚಟಗಳನ್ನು ಬಿಟ್ಟುಬಿಡಿ ಎಂದು ತಿಳಿಹೇಳಿ ಜನರ ಮನಃ ಪರಿವರ್ತನೆ ಮಾಡಿಸುತ್ತಿದ್ದರು. ಇಂದೂ ಸಹ ಸ್ವಾಮೀಜಿಗಳು ಮಠಗಳ ಸ್ಥಾಪನೆ ಮಾಡಿ ಶಿಕ್ಷಣ ಮತ್ತು ದಾಸೋಹವನ್ನು ನೀಡುತ್ತಿದ್ದಾರೆ. ದುರ್ಜನರ ಸಹವಾಸ ದುಶ್ಚಟಗಳಿಗೆ ಎಡೆಮಾಡಿಕೊಡುತ್ತದೆ ಒಳ್ಳೆಯ ಸ್ನೇಹಿತರನ್ನು ಹೊಂದಬೇಕು ಮನಸ್ಸಿನ ಮೇಲೆ ಹತೋಟಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಅನಿತಾ ವಿಮಲಾ ಬ್ರಾಗ್ಸ್ ಅವರು ಮಾತನಾಡಿ ಯುವ ವಯಸ್ಸಿನಲ್ಲಿ ಕೆಟ್ಟ ವಿಷಯಗಳಿಗೆ ಆಕರ್ಷಿತರಾಗುವುದು ಹೆಚ್ಚು. ಜಾಹೀರಾತುಗಳಿಂದ ಹೆಚ್ಚು ಪ್ರಭಾವಿತರಾಗುತ್ತೀರಿ. ದುಶ್ಚಟಗಳಿಗೆ ಯುವಜನತೆ ಒಳಗಾಗಬಾರದು ತಾವು ವಿದ್ಯಾವಂತರಾಗಿದ್ದು ಸ್ವ ಇಚ್ಛೆಯಿಂದ ಉತ್ತಮ ಅಭ್ಯಾಸಗಳನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ಮೆಡಿಕಲ್ ಕಾಲೇಜಿನ ಮನಶಾಸ್ತç ವಿಭಾಗ ಮುಖ್ಯಸ್ಥರಾದ ಡಾ. ರವೀಶ್ ಅವರು ಮಾತನಾಡಿ ದುಶ್ಚಟಗಳಿಗೆ ಒಳಗಾಗುವುದು ಬಹಳ ಸುಲಭ ಇದರಿಂದ ಹೊರಬರುವುದು ಬಹಳ ಕಷ್ಟ. ಕಾಲೇಜು ಹಂತದಲ್ಲಿ ಶೇ.23 ರಷ್ಟು ವಿದ್ಯಾರ್ಥಿಗಳು ಮದ್ಯಪಾನಕ್ಕೆ ಒಳಗಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯ. ಹುಟ್ಟಿನಿಂದ ಯಾರು ವ್ಯಸನಿಗಳಲ್ಲ, ಮದ್ಯ ಸೇವನೆಯೂ ಹಂತಹAತವಾಗಿ ಮಾನವನ ದೇಹವನ್ನು ನಾಶ ಮಾಡುತ್ತಾ ಹೋಗುತ್ತದೆ. ಮದ್ಯಸೇವನೆ ಮಾನವನ ಆಯಸ್ಸನ್ನು ಕಡಿಮೆ ಮಾಡುತ್ತದೆ ಒಂದು ಸಿಗರೇಟಿನಲ್ಲಿ 3000 ವಿಷಕಾರಕ ಅಂಶಗಳು ಇರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎನ್.ಎಸ್.ಎಸ್ ಮುಖ್ಯಸ್ಥರಾದ ಸುರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಮಹದೇವ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.