ಮೈಸೂರು(Mysuru): ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶ್ವರ ದೇವಾಲಯವನ್ನು ಯುನೆಸ್ಕೊ ಪಟ್ಟಿಗೆ ಸೇರುವ ವಿಚಾರವಾಗಿ ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅನುದಾನ ಬರುತ್ತದೆಂದು ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಅವರನ್ನು ಒಕ್ಕಲೆಬ್ಬಿಸುವಂತಹ ಯೋಜನೆಗಳಿಗೆ ಅವಕಾಶ ಬೇಡ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೋಮನಾಥಪುರದ ಚನ್ನಕೇಶ್ವರ ದೇವಾಲಯವನ್ನು ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಪಟ್ಟಿಯಲ್ಲಿ ಸೇರ್ಪಡೆಯ ಮಾನ್ಯತೆಗೆ ಒಳಪಡಿಸುವುದು ಗ್ರಾಮ ಸ್ನೇಹಿಯಾಗಿದ್ದರೆ ಮಾತ್ರ ಅನುಮತಿ ಕೊಡಬೇಕು; ಇಲ್ಲದಿದ್ದರೆ ಬೇಡ ಎಂದು ಕೋರಿದರು.
ಸೋಮನಾಥಪುರದಲ್ಲಿ ಯಾವ ಜಾಗ ಯಾವ ಇಲಾಖೆಗೆ ಸೇರಿದ್ದು ಎನ್ನುವುದನ್ನು ಮೊದಲು ಗುರುತಿಸಬೇಕು. ದೇಗುಲಕ್ಕೆ ಯುನೆಸ್ಕೊ ಮಾನ್ಯತೆಗಾಗಿ, ಆ ನಿಯಮಗಳಿಗೆ ಒಳಪಟ್ಟು ಜನರನ್ನು ಒಕ್ಕಲೆಬ್ಬಿಸಲಾಗದು ಎಂದರು.
ಹಾಗೇನಾದರೂ ಮಾಡುವುದೇ ಆದಲ್ಲಿ ವ್ಯಾಪ್ತಿಯಲ್ಲಿ ದೇಗುಲ ಸ್ಥಳದಿಂದ 100 ಮೀಟರ್ಗೆ ಅನ್ವಯಿಸಬೇಕು. ಕಾಂಪೌಂಡ್ ಬಳಿಯಿಂದ 100 ಮೀಟರ್ ಎಂದು ಪರಿಗಣಿಸಿದರೆ ಮನೆಗಳಿಗೆ ತೊಂದರೆ ಆಗುತ್ತದೆ. ನಿರ್ಮಾಣ ಚಟುವಟಿಕೆ ಮಾಡಲಾಗುವುದಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ (ಎಎಸ್ಐ) ಹಸ್ತಾಂತರಿಸದ ಬಳಿಕ ತೊಂದರೆ ಆಗುತ್ತದೆ. ಜನರು ಮನೆ ಕಟ್ಟಲು ಆಗುವುದಿಲ್ಲ ಎಂದು ತಿಳಿಸಿದರು.
ಯುನೆಸ್ಕೊ ಪಟ್ಟಿಯಲ್ಲಿ ಹೆಸರು ಗಳಿಸುವುದರಿಂದ ಪ್ರವಾಸೋದ್ಯಮ ವೃದ್ಧಿಸಲಿದೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದರು.
ಪಾರಂಪರಿಕವಾದ ದೇವಸ್ಥಾನದ ಸುತ್ತ ಅಭಿವೃದ್ಧಿ ಕಾಮಗಾರಗಳಿಗೆ ನಿಷೇಧ ಈಗಲೂ ಇಲ್ಲ; ನಿರ್ಬಂಧವಷ್ಟೆ ಇದೆ. ಯುನೆಸ್ಕೊ ಪಟ್ಟಿಗೆ ಸೇರಿಸುವ ನಿರ್ಧಾರವು ನಮ್ಮ ಹಂತದಲ್ಲಿ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಡೆಯುತ್ತದೆ. ಯುನೆಸ್ಕೊ ತಂಡದ ಭೇಟಿ ಹಿನ್ನೆಲೆಯಲ್ಲಿ ಈಗ ಅಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದರು.
₹ 3.40 ಕೋಟಿ ವೆಚ್ಚದಲ್ಲಿಅಭಿವೃದ್ಧಿ ಕಾಮಗಾರಿ: ಸೋಮನಾಥಪುರ ದೇಗುಲವನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ಸಂಬಂಧ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದ್ದು, ಪರಿಶೀಲನೆಗಾಗಿ ಯುನೆಸ್ಕೊ ತಂಡವು ಆಗಸ್ಟ್ನಲ್ಲಿ ಬರುತ್ತಿದೆ. ಹೀಗಾಗಿ, ಅಲ್ಲಿ ₹ 3.40 ಕೋಟಿ ವೆಚ್ಚದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ ತಿಳಿಸಿದರು. ಅಭಿವೃದ್ಧಿ ಯೋಜನೆಗಳ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿತು.