ಮನೆ ರಾಜಕೀಯ ಬರೀ ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರ ನಗರ ಪ್ರದಕ್ಷಿಣೆ ಮಾಡಬೇಡಿ: ಬೊಮ್ಮಾಯಿ ವಿರುದ್ಧ ಎಚ್ಡಿಕೆ ಕಿಡಿ

ಬರೀ ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರ ನಗರ ಪ್ರದಕ್ಷಿಣೆ ಮಾಡಬೇಡಿ: ಬೊಮ್ಮಾಯಿ ವಿರುದ್ಧ ಎಚ್ಡಿಕೆ ಕಿಡಿ

0

ಬೆಂಗಳೂರು (Bengaluru)-ಬರೀ ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.  

ಬೆಂಗಳೂರಲ್ಲಿ ಮಳೆಯಿಂದ ಅವಾಂತರ ಸೃಷ್ಟಿ ಹಿನ್ನೆಲೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿಯುತ್ತಿದೆ. ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಸಿಎಂ ಬೊಮ್ಮಾಯಿ ಅವರು ನಿನ್ನೆ ಆರ್.ಆರ್.ನಗರಕ್ಕೆ ಒಂದು ಕಡೆ ಮಾತ್ರ ಭೇಟಿ ಕೊಟ್ಟು, ಚಿಕ್ಕಮಗಳೂರಿನ ಶಾಸಕನ ಸರ್ಟಿಫಿಕೇಟ್ ಕೊಡೋಕೆ ಹೋಗಿದ್ದರು. ಇವತ್ತು ಕಾಟಾಚಾರ ಪ್ರದಕ್ಷಿಣೆ ಮಾಡಿ ಜನರಿಂದ ಕದ್ದು ಮುಚ್ಚಿ ಬಂದಿದ್ದಾರೆ ಎಂದು ಟೀಕಿಸಿದರು.

ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಷ್ಟೊಂದು ದೊಡ್ಡ ಮಟ್ಟದ ಮಳೆಯಾದರೂ ಶಾಸಕರು ಅಧಿಕಾರಿಗಳ ಸಭೆ ಕರೆದಿಲ್ಲ. ಅಧಿಕಾರಿಗಳ ಸಭೆ ಕರೆದು ಏನಾದರೂ ಸೂಚನೆ ಕೊಟ್ಟಿದ್ದಾರಾ? ಬೆಂಗಳೂರು ಮಹಾನಗರದಲ್ಲಿ ಸಪ್ತ ಸಚಿವರಂತೆ ಏಳು ಸಚಿವರು ಇದ್ದಾರೆ. ಇಷ್ಟು ಜನ ಇಟ್ಟುಕೊಂಡು ನಗರದ ಜನತೆಗೆ ಏನು ಸಂದೇಶ ಕೊಡ್ತಿದ್ದಾರೆ? ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ತಗೊಂಡು ಹೋದರು? ಆ ಹಣವನ್ನು ಯಾರಿಗೆ ಕೊಟ್ಟಿದ್ದಾರೆ? ಬರೀ ಫೋಟೋ ತೆಗೆಸಿಕೊಳ್ಳೋಕೆ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಕಿಡಿಕಾರಿದರು.

ಕಂದಾಯ ಸಚಿವರ ಕ್ಷೇತ್ರದಲ್ಲಿ ಎಷ್ಟು ಕೆರೆ ನುಂಗಿ ಹಾಕಿದ್ದಾರೆ..? ಪುಟ್ಟೇನಹಳ್ಳಿ ಕೆರೆ ನಾಶಗೊಳಿಸಿ ಜೆಪಿ ನಗರ ಡಾಲರ್ಸ್ ಕಾಲೋನಿ ಅಂತಾ ಮಾಡಿಕೊಂಡರು. ಈ ಹಿಂದೆ ನಾನು ೧೪ ತಿಂಗಳು ಸಿಎಂ ಆಗಿದ್ದಾಗ ಇದನ್ನು ಸ್ವಚ್ಛ ಮಾಡುವ ಶಕ್ತಿ ಇರಲಿಲ್ಲ. ಯಾಕೆಂದರೆ ಆಗ ನನಗೆ ಅದರ ಸ್ವಾತಂತ್ರವೇ ಇರಲಿಲ್ಲ. ಆಗ ನಗರಾಭಿವೃದ್ಧಿ ಸಚಿವರು, ಉಪ ಮುಖ್ಯಮಂತ್ರಿ ಆದವರು ಅವರೇ ಸಭೆ ಕರೆಯಬೇಕಿತ್ತು. ನಾನು ಮುಖ್ಯಮಂತ್ರಿಯಾದರೂ ಕೂಡ ಸುಮ್ಮನೆ ಇರಬೇಕಿತ್ತು. ಬೆಂಗಳೂರಿಗೆ ಸಂಬಂಧಿಸಿದಂತೆ ಸಭೆ ಕರೆಯೋ ಹಾಗಿರಲಿಲ್ಲ. ಆ ರೀತಿಯ ಸಂದರ್ಭ ಇತ್ತು ಎಂದರು.

ನಾನು ತೋರಿಕೆಗಾಗಿ ಪ್ರದಕ್ಷಣೆ ಮಾಡಲ್ಲ. ತಡವಾದರೂ ಒಂದು ವಾರ ನಾನು ನಗರ ಪ್ರದಕ್ಷಿಣೆ ಮಾಡುತ್ತೇನೆ. ನಗರದ ಬಹುತೇಕ ಕ್ಷೇತ್ರಗಳಿಗೆ ನಾನು  ಹೋಗುತ್ತೇನೆ. ಜೊತೆಗೆ ಒಂದಿಷ್ಟು ಭಾಗಗಳಿಗೆ ಮುಖಂಡರು ಹೋಗುತ್ತಾರೆ. ನೀರು ನುಗ್ಗಿರುವ ಮನೆಗಳಿಗೆ ಪಕ್ಷದ ವತಿಯಿಂದ ತಕ್ಷಣ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ಬಡ ಕುಟುಂಬಗಳಿಗೆ ನೆರವು ನೀಡುತ್ತೇನೆ. ಯಾವ್ಯಾವ ಬಡಾವಣೆಯಲ್ಲಿ ಏನೇನು ಅನಾಹುತ ಆಗಿದೆ ಅನ್ನೋದರ ಲಿಸ್ಟ್ ಮಾಡಲು ಹೇಳಿದ್ದೇನೆ. ನಾನು ಸಮಸ್ಯೆ ಆದ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಒಂದು ಗಂಟೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಉಳಿಸುವ ಬಗ್ಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಪತ್ರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಎಚ್ಡಿಕೆ ಅವರು, ಅವರ ಕಾಲದಲ್ಲಿ ಬೆಂಗಳೂರಿಗೆ ಬ್ರ್ಯಾಂಡ್ ಎಲ್ಲಿತ್ತು? ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ. ಅವರು ಬಂದು ಬ್ರಾಂಡ್ ಬೆಂಗಳೂರಿನ ಹೆಸರನ್ನು ಹೈಜಾಕ್ ಮಾಡಿದ್ದರು. ಬರೀ ಸೂಟು ಬೂಟು ಹಾಕಿಕೊಂಡ್ರೆ ಬ್ರಾಂಡ್ ಬೆಂಗಳೂರು ಆಗುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಆಗುತ್ತದೆ. ಕೆರೆ ಕಟ್ಟೆ ನುಂಗಿ‌ ಹಾಕಿದ್ದು ಯಾರು? ಕೆರೆ ಕಟ್ಟೆ ಉಳಿಸಬೇಕು, ಒತ್ತುವರಿ ಮಾಡಬಾರದೆಂದು ಲಕ್ಷ್ಮಣ್ ರಾವ್ ನೇತೃತ್ವದಲ್ಲಿ ಕಮಿಟಿ ಮಾಡಿದರು. ಆದರೆ, ಅವರು ಕೊಟ್ಟ ವರದಿ ಕಸದ ಬುಟ್ಟಿಗೆ ಹೋಯಿತು. ಕೆರೆ ಮುಚ್ಚಿ ಹಾಕಿ‌ ಮನೆ ಕಟ್ಟಿದರು. ಕೆರೆಗೆ ಹೋಗುವ ನೀರು ಮನೆಗಳಿಗೆ ನುಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಎಸ್.ಎಂ ಕೃಷ್ಣ ಅವರು ಸಿಎಂಗೆ ಬರೆದ ಪತ್ರಕ್ಕೆ ಟಾಂಗ್ ಕೊಟ್ಟರು.

ಇನ್ನು ಪಕ್ಷದ ಕುರಿತು ಮಾತಾಡಿದ ಅವರು, ಕಳೆದ ಮೂರು ವರ್ಷದಲ್ಲಿ ಪಕ್ಷದ ಒಂದಷ್ಟು ಜನ ದೂರ ಉಳಿದಿದ್ದಾರೆ. ಜೆಡಿಎಸ್ ನಿಂದ ದೂರ ಉಳಿದವರನ್ನು ಮನವೊಲಿಸಲು ಸಲಹೆ ಬಂದಿದೆ. ಇದಕ್ಕೆ ವೇದಿಕೆ ಸೃಷ್ಟಿಸುವ ಬಗ್ಗೆ ತೀರ್ಮಾನವಾಗಿದೆ. ಪಕ್ಷದ ಸಂಘಟನೆ ಕುರಿತೂ ಚರ್ಚೆಯಾಗಿದೆ. ಪರಿಷತ್ ಗೆ ಒಬ್ಬರನ್ನ ಆಯ್ಕೆ ಮಾಡಬೇಕು. ಅದರ ಸಂಪೂರ್ಣ ತೀರ್ಮಾನವನ್ನ ದೇವೇಗೌಡರಿಗೆ ಬಿಡಲಾಗಿದೆ. ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಗೆ ಎರಡು ಪಕ್ಷಗಳಿಗೆ ಯಾವುದೇ ಸಂಖ್ಯಾಬಲ ಇಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಒಂದು ಸ್ಥಾನ ಇದೆ. ಇದರ ಬಗ್ಗೆಯೂ ದೇವೇಗೌಡರ ತೀರ್ಮಾನವೇ ಅಂತಿಮವಾಗಿರುತ್ತೆ ಎಂದು ಕುಮಾರಸ್ವಾಮಿ ಹೇಳಿದರು.