ಮನೆ ರಾಜ್ಯ ”ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ”. ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ಎಚ್.ಡಿ.ದೇವೇಗೌಡ ಎಚ್ಚರಿಕೆ

”ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ”. ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ಎಚ್.ಡಿ.ದೇವೇಗೌಡ ಎಚ್ಚರಿಕೆ

0

ಬೆಂಗಳೂರು : ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ವೈರಲ್ ಆದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅಜ್ಜ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎಚ್ಚರಿಕೆ ನೀಡಿ, ”ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

Join Our Whatsapp Group

ಸಾಮಾಜಿಕ ತಾಣ ಎಕ್ಸ್ ನಲ್ಲಿ ಗುರುವಾರ ಭಾವನಾತ್ಮಕ ಪತ್ರವೊಂದನ್ನು ಪೋಸ್ಟ್ ಮಾಡಿರುವ ಮಾಜಿ ಪ್ರಧಾನಿ, ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಕೂಡಲೇ ಹಿಂತಿರುಗಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದೇನೆ. ಇನ್ನು ಮುಂದೆ ನನ್ನ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಬರೆದಿದ್ದಾರೆ.

ಮೇ 18 ರಂದು ನಾನು ದೇವಸ್ಥಾನಕ್ಕೆ ಪೂಜೆಗೆ ತೆರಳುವ ವೇಳೆ ಪ್ರಜ್ವಲ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದೇನೆ. ನನಗೆ, ನನ್ನ ಕುಟುಂಬಕ್ಕೆ , ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಆಗಿರುವ ಆಘಾತ ಮತ್ತು ನೋವಿನಿಂದ ಹೊರ ಬರಲು ಕೆಲವು ಸಮಯ ಬೇಕಾಯಿತು. ತಪ್ಪು ಸಾಬೀತಾದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾನು ಈಗಾಗಲೇ ಹೇಳಿದ್ದೇನೆ. ಹಗರಣ ಬಯಲಾದ ದಿನದಿಂದಲೂ ನನ್ನ ಮಗ ಎಚ್.ಡಿ.ಕುಮಾರಸ್ವಾಮಿ ಕೂಡ ಇದನ್ನೇ ಹೇಳಿದ್ದಾರೆ  ಎಂದು ಬರೆದಿದ್ದಾರೆ.

ಜನರು ನನ್ನ ಬಗ್ಗೆ, ನಮ್ಮ ಕುಟುಂಬದ ವಿರುದ್ಧ ಕಠೋರ ಪದಗಳನ್ನು ನಾನಾ ವಿರುದ್ಧ ಬಳಸುತ್ತಿದ್ದಾರೆ ಎನ್ನುವುದು ನನಗೆ ಅರಿವಿದೆ. ನಾನು ಅವರನ್ನು ತಡೆಯುವುದಿಲ್ಲ, ಅವರನ್ನು ಟೀಕಿಸುವುದಿಲ್ಲ ಅವರೊಂದಿಗೆ ವಾದ ಮಾಡುವುದಿಲ್ಲ. ಅವರೆಲ್ಲರೂ ಸತ್ಯ ಹೊರ ಬರುವ ವರೆಗೆ ಕಾಯಬೇಕು ಎಂದು ಬರೆದಿದ್ದಾರೆ.

ನಾನು ಪ್ರಜ್ವಲ್ ನನ್ನ ರಕ್ಷಿಸುವ ಬಯಕೆಯನ್ನು ಹೊಂದಿಲ್ಲ ಎಂದು ನಾನು ಜನರಿಗೆ ಮನವರಿಕೆ ಮಾಡಲು ಸಾಧ್ಯವಿಲ್ಲ. ದೇವರಲ್ಲಿ ನನಗೆ ನಂಬಿಕೆ ಇದೆ. ದೇವರಿಗೆ ಸತ್ಯ ಏನೆಂಬುದು ಗೊತ್ತಿದೆ. ನಾನು ಕಳೆದ ಕೆಲ ದಿನಗಳಿಂದ ಚರ್ಚೆಯಾಗುತ್ತಿರುವ ರಾಜಕೀಯ ಪಿತೂರಿ, ಉತ್ಪ್ರೇಕ್ಷೆ, ಸುಳ್ಳು ಸುದ್ದಿಗಳ ಕುರಿತು ಪ್ರತಿಕ್ರಿಯಿಸುವ ಸಾಹಸ ಮಾಡುವುದಿಲ್ಲ. ನನ್ನ ನೋವೆಲ್ಲವನ್ನೂ ದೇವರ ಪಾದಕ್ಕೆ ಅರ್ಪಿಸುತ್ತೇನೆ. ಯಾರು ಈ ರೀತಿ ಮಾಡಿದ್ದಾರೋ ಅವರು ದೇವರಿಗೆ ಉತ್ತರ ನೀಡಬೇಕು ಮತ್ತು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಭಾವನಾತ್ಮಕ ಪತ್ರ ಬರೆದಿದ್ದಾರೆ.