ಮನೆ ರಾಜ್ಯ ಆಗಸ್ಟ್ 30 ಕ್ಕೆ ಮನೆ ಮನೆಗೂ ಗೃಹಲಕ್ಷ್ಮಿ: ಲಕ್ಷ್ಮೀ ಹೆಬ್ಬಾಳ್ಕರ್

ಆಗಸ್ಟ್ 30 ಕ್ಕೆ ಮನೆ ಮನೆಗೂ ಗೃಹಲಕ್ಷ್ಮಿ: ಲಕ್ಷ್ಮೀ ಹೆಬ್ಬಾಳ್ಕರ್

0

ಮೈಸೂರು: ರಾಜ್ಯ ಸರಕಾರದ ಐದು ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ  ಚಾಲನೆ ನೀಡಲಾಗುತಿದ್ದು,   ರಾಜ್ಯದ  1ಕೋಟಿ 10ಲಕ್ಷ  ಕುಟುಂಬಗಳ ಯಜಮಾನಿಯರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಲಿದೆ.ಇದರಲ್ಲಿ ಮೈಸೂರು ಭಾಗದ 4 ಜಿಲ್ಲೆಗಳ 13,81,430ಕುಟುಂಬಗಳು ಸೇರಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಜಿ.ಪಂ.ಸಭಾಂಗಣದಲ್ಲಿ ಭಾನುವಾರ ನಡೆದ ಮೈಸೂರು, ಮಂಡ್ಯ,ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳ ಹಾಗೂ ಜಿ.ಪಂ.ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು,ಸಂಪುಟದ ಸದಸ್ಯರು ಹಾಗೂ ದೆಹಲಿಯಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸುತ್ತಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು.

ಸುಮಾರು 1.5 ಲಕ್ಷ ಮಹಿಳೆಯರು ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗಿಯಾಗುವುದರೊಂದಿಗೆ  ಐತಿಹಾಸಿಕ ಕಾರ್ಯಕ್ರಮ ಆಗುವುದರೊಂದಿಗೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು. 

ಈಗಾಗಲೇ ಶೇ.80 ರಷ್ಟು ನೋಂದಣಿ ಪ್ರಕ್ರಿಯೆ ಮುಗಿದಿದ್ದು,ನೋಂಣಿಗೆ ಸಮಯ ನಿಗದಿ ಮಾಡಿರುವುದಿಲ್ಲ ನೋಂದಣಿ ನಿರಂತರವಾಗಿರುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಮಾತನಾಡಿ,ರಾಜ್ಯದ 130 ಲಕ್ಷ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸಲು  ಇದೊಂದು ಉತ್ತಮ ಯೋಜನೆಯಾಗಿದ್ದು, ಸ್ವಾತಂತ್ರ್ಯಾನಂತರದ ಬಹುದೊಡ್ಡ ಯೋಜನೆಯಾಗಿದೆ , ಮಹಿಳಾ ಸಶಸ್ತೀಕರಣದೊಂದಿಗೆ ಮಹಿಳೆಯರ ಆತ್ಮಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದರು.ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದು ಅವರಿಗೆ ಸರಿಯಾದ ಊಟ,ಶೌಚಾಲಯ, ಬಸ್ ವ್ಯವಸ್ಥೆ, ಕುಡಿಯುವ ನೀರು ಸಮರ್ಪಕವಾಗಿರಲಿ ಎಂದರು.

ಸಭೆಯಲ್ಲಿ ಶಾಸಕ ರಾದ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ,ರವಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಅರ್ಚನ,ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

ಹಿಂದಿನ ಲೇಖನಪದವೀಧರರಿಗೆ ಮೆಸ್ಕಾಂನಲ್ಲಿದೆ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ
ಮುಂದಿನ ಲೇಖನಮಂಡ್ಯ: ಮನೆ ಜಮೀನಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ