ಬೆಂಗಳೂರು : ರಾಜ್ಯಾಧ್ಯಂತ ಸಂಚಲನ ಸೃಷ್ಟಿಸಿದ್ದ ಡಾಕ್ಟರ್ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಹತ್ಯೆ ಪ್ರಕರಣದ ವಿಚಾರಣೆಗೆ ಸರ್ಕಾರ ಎಸ್ಪಿಪಿಯನ್ನಾಗಿ ಹಿರಿಯ ವಕೀಲರಾದ ಪ್ರಸನ್ನಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ.
ಕೃತಿಕಾ ರೆಡ್ಡಿಯನ್ನು ಆಕೆಯ ಪತಿ ಡಾಕ್ಟರ್ ಮಹೇಂದ್ರ ರೆಡ್ಡಿ ಅನಸ್ತೇಶಿಯಾ ಕೊಟ್ಟು ಹತ್ಯೆ ಮಾಡಿದ್ದ. ಸಾವು ಸಂಭವಿಸಿದ 6 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಪಡೆದಿದ್ದ ಪೊಲೀಸರು ಮಹೇಂದ್ರನನ್ನು ಬಂಧಿಸಿದ್ದರು. ಇದೀಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಎಸ್ಪಿಪಿಯಾಗಿ ಪ್ರಸನ್ನಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿತ್ತು.
ಗಂಡನಿಂದಲೇ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಆಗರ್ಭ ಶ್ರೀಮಂತೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಮುನ್ನೇಕೊಳಲುವಿನಲ್ಲಿ ಮುನಿರೆಡ್ಡಿ ಜಮೀನ್ದಾರರಾಗಿದ್ದು, ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರುತ್ತೆ.
ಹೀಗಾಗಿ ಮಗಳನ್ನು ಅದ್ಧೂರಿಯಾಗಿಯೇ ಮದ್ವೆ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್ ಮಹೇಂದ್ರ ರೆಡ್ಡಿ ಕುಟುಂಬ ಕೂಡ ಕಡಿಮೆ ಏನಿರಲಿಲ್ಲ. ಆದ್ರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ರು ಎಂದು ತಿಳಿದುಬಂದಿದೆ.














