ಮನೆ ಸ್ಥಳೀಯ ಕನ್ನಡ ಭಾಷೆ ಉಳಿಸಿ ಬೆಳೆಸಲು ಹೆಚ್ಚು ಹೋರಾಟ ಮಾಡಿದವರು ಡಾ.ರಾಜ್ ಕುಮಾರ್: ಮಹೇಶ್

ಕನ್ನಡ ಭಾಷೆ ಉಳಿಸಿ ಬೆಳೆಸಲು ಹೆಚ್ಚು ಹೋರಾಟ ಮಾಡಿದವರು ಡಾ.ರಾಜ್ ಕುಮಾರ್: ಮಹೇಶ್

0

ಮೈಸೂರು: ಕನ್ನಡಕ್ಕಾಗಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚು ಹೋರಾಟ ಮಾಡಿ, ಗೋಕಾಕ್ ಚಳುವಳಿಯಂತಹ ಎಲ್ಲಾ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಕ್ಕಾಗಿ ಹೆಚ್ಚು ಶ್ರಮಪಟ್ಟವರು ಡಾ.ರಾಜ್ ಕುಮಾರ್ ಅವರು ಎಂದು ಮೈಸೂರಿನ ತಹಶೀಲ್ದಾರ್‌ರ ಮಹೇಶ್ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕನ್ನಡ ಕಂಠೀರವ, ಬಂಗಾರದ ಮನುಷ್ಯ, ವರನಟ ರಾಜ್ ಕುಮಾರ್ ರವರ 97 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಇಂತಹ ಮಹನೀಯರ ಜಯಂತಿಯಲ್ಲಿ ಭಾಗಿಯಾಗಿರುವುದು ನನಗೆ ಬಹಳ ಸಂತೋಷ ಉಂಟುಮಾಡಿದೆ ಎಂದು ಹೇಳಿದರು.

ರಾಜ್ ಕುಮಾರ್ ಅವರು ಜೀವನ ಸರಳತೆ ಇಂದ ಕೂಡಿದ್ದು, ಅವರು ತೆರೆಯ ಮೇಲೆ ತಾವು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡು ಜೀವಿಸುತ್ತಿದ್ದರು. ಇಂದಿಗೂ ಸಹ ಜನರ ಮನದಲ್ಲಿ ಅಚ್ಚಳಿಯದೆ ಉಳಿದ್ದಿದ್ದಾರೆ ಎಂದರೆ ಅದು ಡಾ. ರಾಜ್ ಕುಮಾರ್ ಅವರು ಮಕ್ಕಳನ್ನು ಹಾಗೂ ಹಿರಿಯರನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು.

ಕರ್ನಾಟಕದಲ್ಲಿಯೇ ಹೆಚ್ಚು ಬಿರುದ್ದನ್ನು ಪಡೆದಿರುವವರು ಏಕೈಕ ನಟ ಎಂದರೆ ಡಾ. ರಾಜ್ ಕುಮಾರ್ ಅವರು. ತಮ್ಮ ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಮೊದಲಾದ ಬಿರುದುಗಳು ಲಭಿಸಿದ್ದು, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವ ವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ನಟ ಡಾ. ರಾಜ್ ಕುಮಾರ್ ಎಂದು ಹೇಳಿದರು.

ಬಂಗಾರದ ಮನುಷ್ಯ, ಪ್ರತಿಭಾನ್ವಿತ ನಟ, ಗಾನಗಂಧರ್ವ, ಆಕಾಶದ ಗಾಯಕ, ಕನ್ನಡ ಕಂಠೀರವ, ಅಣ್ಣಾವ್ರು ಎಂಬ ಅನೇಕ ಹೆಸರಿನಲ್ಲಿ ಇವರನ್ನು ಕರೆಯಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಪ್ರತಿಭಾ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಕೆ. ಎನ್. ರಮೇಶ್, ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ, ಡಾ.ರಾಜ್ ಕುಮಾರ್ ಅವರ ಸಂಬoಧಿ ಎಸ್.ಎ.ಶ್ರೀನಿವಾಸ್, ಮುಖಂಡರಾದ ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.