ಚಾಮರಾಜನಗರ(Chamarajanagar): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆಯಲ್ಲಿ ಯುವಕರು ಕುಡಿದು ಮೋಜು ಮಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲ ತಿಂಗಳ ಹಿಂದೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಹಿರೀಕೆರೆ ತುಂಬಿ ಕೋಡಿ ಬಿದ್ದಿತ್ತು. ಇದನ್ನು ನೋಡಲು ಹಂಗಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಕೆರೆ ಕೋಡಿ ಕಂಡು ಪುಳಕಿತರಾಗಿದ್ದರು. ಗ್ರಾಮಸ್ಥರು ಬಾಗಿನವನ್ನೂ ಅರ್ಪಿಸಿದ್ದರು.
ಕೆರೆ ಅಭಯಾರಣ್ಯ ವ್ಯಾಪ್ತಿಗೆ ಬರುವ ಕಾರಣ ಅರಣ್ಯ ಇಲಾಖೆ ವತಿಯಿಂದ ಪ್ರವೇಶ ದ್ವಾರದಲ್ಲಿ ಗೇಟ್ ಇರಿಸಲಾಗಿದ್ದು, ಅನುಮತಿ ನಂತರವಷ್ಟೆ ಒಳಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಕೆಲ ಪ್ರವಾಸಿಗರು ಕೆರೆ ವೀಕ್ಷಣೆ ನೆಪದಲ್ಲಿ ರಾಜಾರೋಷವಾಗಿ ಕೆರೆಯ ಕೋಡಿ ಸ್ಥಳದಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ.
ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಗೆ ಬರುವ ಹಿರೀಕೆರೆ ಸೂಕ್ಷ್ಮ ಪರಿಸರ ಪ್ರದೇಶವಾಗಿರುವ ಹಿನ್ನೆಲೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಲಾಗಿದೆ.
ಸ್ಥಳೀಯರು ಮತ್ತು ಕೆರೆ ವೀಕ್ಷಣೆಗೆ ಇತರೆಡೆಯಿಂದ ಬರುವ ಪ್ರವಾಸಿಗರು ಕೆರೆಗೆ ನೋಡಲು ತೆರಳಿದ ವೇಳೆ ಅರಣ್ಯ ಸಿಬ್ಬಂದಿ ಒಳಗೆ ಬಿಡುವುದಿಲ್ಲ. ಹೀಗಿದ್ದರೂ ಮೋಜು ಮಸ್ತಿ ಮಾಡಲು ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆ ಎದ್ದಿದೆ.
ಹಿರೀಕೆರೆಯಲ್ಲಿ ಈಜಾಡುವುದು ಹಾಗೂ ಮದ್ಯ ಸೇವನೆ ಮಾಹಿತಿ ಇಲ್ಲ. ಸಿಬ್ಬಂದಿಯಿಂದ ಮಾಹಿತಿ ಪಡೆದು ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಗೋಪಾಲಸ್ವಾಮಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.