ಮೈಸೂರು (Mysuru): ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಂ.ಐ.ಎಸ್ ನಿರ್ವಹಣೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಎಂಐಎಸ್ ಸಂಯೋಜಕರಿಗೆ ತರಬೇತಿ ನೀಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಎಂಐಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನದ ಕಾರ್ಯಗಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಈ ವೇಳೆ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ತಾಂತ್ರಿಕ ನಿರ್ದೇಶಕರಾದ ಎಂ.ಸೆಲ್ವೇಶ್ವರನ್ ಅವರು ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಚೀಟಿ ನೀಡಲು ನರೇಗಾ ತಂತ್ರಾಂಶದಲ್ಲಿ ಅನುಸರಿಸಬೇಕಾದ ತಾಂತ್ರಿಕ ವಿಧಾನ ಹಾಗೂ ಅಗತ್ಯ ಮಾಹಿತಿಯನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆಯನ್ನು ವಿವರಿಸಿದರು.
ಉದ್ಯೋಗ ಚೀಟಿ ನೋಂದಣಿ ಪ್ರಕ್ರಿಯೆಯಲ್ಲಿ ವಿವಿಧ ನಿಯಮಗಳನ್ನು ಅನುಸರಿಸಬೇಕು. ವ್ಯಕ್ತಿಯು ಕುಟುಂಬದಿಂದ ಬೇರ್ಪಟ್ಟಾಗ ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿ ನಿಯಮಾನುಸಾರ ಉದ್ಯೋಗ ಚೀಟಿ ವಿತರಿಸುವ ಬಗ್ಗೆ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ವಿಶೇಷ ಚೇತನರಿಗೆ ಉದ್ಯೋಗ ಚೀಟಿ ವಿತರಿಸುವಾಗ ಅನುಸರಿಬೇಕಾದ ತಾಂತ್ರಿಕ ನಿಯಮಗಳನ್ನು ತಿಳಿಸಿದರು.
ಯೋಜನೆಯಡಿ ಅನುಷ್ಠಾನವಾಗುವ ಕಾಮಗಾರಿಯಲ್ಲಿ 20 ಕ್ಕಿಂತ ಹೆಚ್ಚು ಕೂಲಿ ಕಾರ್ಮಿಕರಿದ್ದಲ್ಲಿ ಎನ್.ಎನ್.ಎಂ.ಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ಪಡೆಯಬೇಕು. ಉದ್ಯೋಗ ಚೀಟಿ ಹೊಂದಿರುವ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಬೇಕು ಎಂದು ಹೇಳಿದರು.
ಉದ್ಯೋಗ ಚೀಟಿ ಹೊಂದಿದ್ದ ವ್ಯಕ್ತಿ ಮೃತರಾದಲ್ಲಿ ಡಿಲಿಟ್ ಮಾಡುವ ವಿಧಾನದ ಬಗ್ಗೆ ವಿವರಿಸಿದ ಅವರು, ಯಾವುದಾದರೂ ಉದ್ಯೋಗ ಚೀಟಿ ರದ್ದುಗೊಳಿಸುವ ಮೊದಲು ಆ ವ್ಯಕ್ತಿಗೆ ಬಾಕಿ ಕೂಲಿ ಮೊತ್ತ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳವ ಬಗ್ಗೆ ಗಮನಹರಿಸುವಂತೆ ಎಂ.ಐ.ಎಸ್ ಸಂಯೋಜಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಪನ್ಮೂಲ ವ್ಯಕ್ತಿಗಳಾದ ಮುಖೇಶ್ ಕುಮಾರ್ ಕಶ್ಯಪ್, ಉದಯವೀರ್ ಸಿಂಗ್, ಸುರಭ್ ಮಿತ್ರ ಅವರು ಎಂ.ಐ.ಎಸ್ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಸಂಯೋಜಕರೊಡನೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಅವರು, ರಾಜ್ಯ ಎಂ.ಐ.ಎಸ್. ಸಂಯೋಜಕರಾದ ತೇಜಸ್ ಅವರು ಸೇರಿದಂತೆ ವಿವಿಧ ಜಿಲ್ಲೆಗಳ ಸಂಯೋಜಕರು ಉಪಸ್ಥಿತರಿದ್ದರು.