ಉತ್ತರಪ್ರದೇಶ: ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಕಾರಿಗೆ ಗುದ್ದಿದ ಪರಿಣಾಮ ಬೆಂಕಿ ಕಾಣಿಸಿಕೊಂಡು ಕಾರಿನಲ್ಲಿದ್ದ ಐವರು ಸಜೀವ ದಹನಗೊಂಡ ಭೀಕರ ಘಟನೆ ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಸಂಭವಿಸಿದೆ.
ಮಥುರಾದ ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್ ಪುರ ಗ್ರಾಮದ ಬಳಿಯ ಮೈಲ್ ಸ್ಟೋನ್ 110ರಲ್ಲಿ ಘಟನೆ ನಡೆದಿದ್ದು, ಎರಡೂ ವಾಹನಗಳು ಸುಟ್ಟು ಕರಕಲಾಗಿದ್ದು ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನಿಂದ ಹೊರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಕಾರಿನಲ್ಲಿದ್ದ ಐದು ಮಂದಿ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದು, ಹೊರ ಬರಲಾಗದೆ ಕೂಡಲೇ ಕಾರಿಗೆ ಬೆಂಕಿ ಆವರಿಸಿದ ಪರಿಣಾಮ ಕಾರಿನಲ್ಲಿದ್ದ ಐವರು ಸಜೀವ ದಹನಗೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ಹಂಚಿಕೊಂಡ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ , “ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಆಗ್ರಾದಿಂದ ನೋಯ್ಡಾಕ್ಕೆ ತೆರಳುತ್ತಿದ್ದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಅಗ್ನಿಶಾಮಕ ದಳ ಘಟನೆ ನಡೆದು ಅರ್ಧ ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸಲಿಲ್ಲ. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಎರಡೂ ವಾಹನಗಳು ಸುಟ್ಟು ಕರಕಲಾಗಿತ್ತು ಆ ಬಳಿಕ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರಿನಲ್ಲಿದ್ದವರ ವಿವರ ಪಡೆಯಲು ಯತ್ನಿಸುತ್ತಿದ್ದಾರೆ.
ಕಳೆದ ತಿಂಗಳು, ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ 40 ಜನರು ಗಾಯಗೊಂಡಿದ್ದರು.