ಮನೆ ರಾಜ್ಯ ರೈತರ ಖಾತೆಗಳಿಗೆ 2-3 ದಿನಗಳೊಳಗಾಗಿ ಬರ ಪರಿಹಾರ ಮೊತ್ತ ಜಮೆ: ಕೃಷ್ಣ ಬೈರೇಗೌಡ

ರೈತರ ಖಾತೆಗಳಿಗೆ 2-3 ದಿನಗಳೊಳಗಾಗಿ ಬರ ಪರಿಹಾರ ಮೊತ್ತ ಜಮೆ: ಕೃಷ್ಣ ಬೈರೇಗೌಡ

0

ಬೆಂಗಳೂರು: ಕೇಂದ್ರ ಸರ್ಕಾರದ SDRF ಮಾರ್ಗಸೂಚಿಗಳ ಪ್ರಕಾರ NDRF ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ ಒಟ್ಟು ರೂ.636.45 ಕೋಟಿಗಳನ್ನು ಈಗಾಗಲೇ ಫೆಬ್ರುವರಿ ಹಾಗೂ ಮಾರ್ಚ್‌ ಮಾಹೆಗಳಲ್ಲಿ ಪಾವತಿಸಲಾಗಿದೆ. ಈ ಪೈಕಿ 4,43,691 ಅತೀ ಕಡಿಮೆ ಜಮೀನು ಇರುವ ರೈತರಿಗೆ SDRF ಮಾರ್ಗಸೂಚಿಗಳನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Join Our Whatsapp Group

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ‍ರಾಜ್ಯ ಸರ್ಕಾರ ರಾಜ್ಯದ ರೈತರಿಗೆ NDRF ಅಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅದಾದ ಬಳಿಕ ಏ.26ರಂದು ರೂ.3,454.22 ಕೋಟಿಗಳನ್ನು ಕೇಂದ್ರ ಸರ್ಕಾರ NDRF ಅಡಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಿಡುಗಡೆ ಅಗುತ್ತಿದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಏ. 27 ಮತ್ತು 28ರಂದು ಎರಡು ದಿನಗಳು ರಜಾದಿನಗಳು. ನಂತರ 29 ಮತ್ತು 30 ಏಪ್ರಿಲ್ ಎರಡು ದಿನಗಳಂದು ಬಾಕಿ ಉಳಿದ ಬೆಳೆ ಹಾನಿ ಪರಿಹಾರ ನೀಡಲು ಎಲ್ಲ ತಾಂತ್ರಿಕ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಮೇ 1 ರಂದು ಪುನಃ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ರಜಾ ದಿನವಾಗಿರುತ್ತದೆ. ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ SDRF ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಅನುಸಾರ ಎಲ್ಲ ಅರ್ಹ ರೈತರಿಗೆ ಪಾವತಿ ಮಾಡಲು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರಿಗೆ ರೂ. 3,454.22 ಕೋಟಿಗಳನ್ನು ಬಿಡುಗಡೆಗೊಳಿಸಲು ಮೇ 2 ರಂದು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದ್ದಾರೆ.

ಮೇ 6 ರಂತೆ ಒಟ್ಟು 27,38,911 ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.2,425.13 ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ DBT ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಂತ್ಯವೇ ಕ್ರಮ ವಹಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಂತರ ಆರ್‌.ಬಿ.ಐ ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದೇ ಸೋಮವಾರದಿಂದ ಅನ್ವಯವಾಗುವಂತೆ ರೈತರ ಖಾತೆಗೆ ನೇರವಾಗಿ ಜಮಾವಾಗಲಿದೆ. ಎಲ್ಲ ರೈತರ ಖಾತೆಗಳಿಗೆ ಮುಂದಿನ 2-3 ದಿನಗಳೊಳಗಾಗಿ ಬರಪರಿಹಾರ ಮೊತ್ತವು ಜಮೆಯಾಗಲಿದೆ ಎಂದಿದ್ದಾರೆ.

ಇಲ್ಲಿಯವರೆಗೆ ಒಟ್ಟು 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದೆ. ಇನ್ನೂ 2 ಲಕ್ಷ ರೈತರಿಗೆ ಬರಪರಿಹಾರ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ‌. ರಾಜ್ಯದ 224 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರವೇ ರೈತರಿಗೆ ಬರ ಪರಿಹಾರ ಪಾವತಿಸಿದ್ದು, ಇದೀಗ NDRF ಪರಿಹಾರ ಹಣ ಲಭ್ಯವಾಗಿದೆ. ಆ ಹಣವನ್ನೂ ನಿಯಮದಂತೆ ಶೀಘ್ರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗಿದೆ. ಅಲ್ಲದೆ ರಾಜ್ಯದ ಬಾಕಿ ಪರಿಹಾರ ಹಣ ಪಡೆಯಲೂ ಕೇಂದ್ರದ ಜೊತೆಗಿನ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನದಾಖಲೆ ಇಲ್ಲದ 32 ಕೋಟಿ ರೂ. ಪತ್ತೆ: ಜಾರ್ಖಂಡ್ ಸಚಿವರ ಕಾರ್ಯದರ್ಶಿ, ಮನೆಯ ಸಹಾಯಕ ಬಂಧನ
ಮುಂದಿನ ಲೇಖನನನಗೂ ಹಾಸನದ ಪೆನ್‌ ಡ್ರೈವ್‌ ಬಿಡುಗಡೆ ಪ್ರಕರಣಕ್ಕೂ ಸಂಬಂಧ ಇಲ್ಲ: ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ