ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ದುನಿಯಾ ವಿಜಯ್ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಮುಂದಿನ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ರಿಲೀಸ್ ಮಾಡಿ ʼಸಲಗʼ ಫ್ಯಾನ್ಸ್‌ಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಸೋಮವಾರ (ಜ.20ರಂದು) ದುನಿಯಾ ವಿಜಯ್ ಅವರ ಹುಟ್ಟುಹಬ್ಬವಿದೆ. ಈ ಬಾರಿ ಅವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳಿಗೆ ವಿಜಿ ನಿರಾಸೆ ಮಾಡಿಲ್ಲ. ತನ್ನ ಮುಂದಿನ ಸಿನಿಮಾದ ಮಾಸ್ ಟೈಟಲ್- ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ʼಭೀಮʼ ಸಿನಿಮಾದ ಹಿಟ್ ಬಳಿಕ ವಿಜಿ ʼಸಿಟಿ ಲೈಟ್ಸ್ʼ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಿ ಅವರ ಪುತ್ರಿ ಮೋನಿಷಾ ನಟಿಸುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಜಂಟಲ್‌ಮನ್’, ‘ಗುರುಶಿಷ್ಯರು’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಿರ್ದೇಶಕನಾಗಿರುವ ಜಡೇಶ್ ಹಂಪಿ ಅವರು ದುನಿಯಾ ವಿಜಯ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಅನೌನ್ಸ್ ಆದ ದಿನದಿಂದ ಚಿತ್ರದ ಬಗ್ಗೆ ಕುತೂಹಲ ಶುರುವಾಗಿತ್ತು. ಇದೀಗ ಈ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ‘ಲ್ಯಾಂಡ್‌ಲಾರ್ಡ್’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.
ಪಂಚೆ ಮೇಲೆ ಕಟ್ಟಿಕೊಂಡು ಎರಡು ಕೈಗಳಲ್ಲಿ ಕೊಡಲಿಗಳನ್ನು ಹಿಡಿದುಕೊಂಡು ರಗಡ್ & ರಕ್ತಸಿಕ್ತವಾಗಿ ದುನಿಯಾ ವಿಜಿ ಕಾಣಿಸಿಕೊಂಡಿದ್ದಾರೆ. ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎನ್ನುವ ಕ್ಯಾಪ್ಷನ್ ನೀಡಲಾಗಿದೆ.
ಪೋಸ್ಟರ್ ನೋಡದರೆ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆಯನ್ನೊಳಗೊಂಡ ಸಿನಿಮಾವೆಂದು ಗೊತ್ತಾಗುತ್ತದೆ.
ʼಕಾಟೇರʼ ಸಿನಿಮಾಕ್ಕೆ ಕಥೆ ಬರೆದಿದ್ದ ಜಡೇಶ್ ʼಲ್ಯಾಂಡ್ ಲಾರ್ಡ್ʼನಲ್ಲೂ ಅದೇ ರೀತಿಯ ಕಥೆಯನ್ನು ಹೇಳಲಿದ್ದಾರೆ ಎನ್ನಲಾಗಿದೆ. 90ರ ದಶಕದ ಕಥೆ ಚಿತ್ರದಲ್ಲಿರಲಿದೆ ಎನ್ನಲಾಗಿದೆ.
ವಿಜಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಕೆ. ವಿ ಸತ್ಯಪ್ರಕಾಶ್ ಹಾಗೂ ಪುತ್ರ ಸೂರಜ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಲಿದ್ದು, ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ.
ಇದೇ ವರ್ಷ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.