ಮನೆ ಕಾನೂನು ಗೌರಿ ಶಂಕರ್‌ ಆಯ್ಕೆ ಪ್ರಶ್ನೆ: ಸಂಜೆ 7.15ವರೆಗೂ ವಿಚಾರಣೆ;‌ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಗೌರಿ ಶಂಕರ್‌ ಆಯ್ಕೆ ಪ್ರಶ್ನೆ: ಸಂಜೆ 7.15ವರೆಗೂ ವಿಚಾರಣೆ;‌ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

0

ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿ ಶಂಕರ್‌ ಆಯ್ಕೆ ಅಸಿಂಧು ಕೋರಿರುವ ಅರ್ಜಿ ವಿಚಾರಣೆಯನ್ನು ಸುದೀರ್ಘವಾಗಿ ನಾಲ್ಕು ತಾಸು ನಡೆಸಿದ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶ ಕಾಯ್ದಿರಿಸಿದೆ. ವಿಶೇಷವೆಂದರೆ ಮಧ್ಯಾಹ್ನ 3.30ಕ್ಕೆ ಆರಂಭವಾದ ವಿಚಾರಣೆಯು ಸಂಜೆ 7.15ಕ್ಕೆ ಪೂರ್ಣಗೊಂಡಿತು.

ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್‌ ಗೌಡ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮಂಜುನಾಥ್‌ ಹಿರಾಳ್‌ ಅವರು ಪ್ರಕರಣವನ್ನು ವಿನಾ ಕಾರಣ ಎಳೆದಾಡಲಾಗುತ್ತಿದೆ. ಇಷ್ಟು ದಿನ ವಾದ, ಸಾಕ್ಷ್ಯ ಪರಿಶೀಲನೆ, ಸಿಆರ್‌ಪಿಸಿ ಸೆಕ್ಷನ್‌ 98ರ ಅಡಿ ವಿಚಾರಣೆ ನಡೆಸಲಾಗಿದೆ. ವಿಭಿನ್ನವಾದ ಲಿಖಿತ ವಾದವನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಹೊರೆ ಹೆಚ್ಚಿಸಿದ್ದಾರೆ. ಹೀಗಾಗಿ, ಅರ್ಜಿಯನ್ನು ತುರ್ತಾಗಿ ಇತ್ಯರ್ಥಪಡಿಸಬೇಕು ಎಂದು ಸಕಾರಣಗಳನ್ನು ಒಳಗೊಂಡ ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದನ್ನು ಪರಿಶೀಲಿಸಿದ ಪೀಠವು ಪ್ರತಿ ಬಾರಿಯೂ ವಿಚಾರಣೆ ಮುಂದೂಡಿಕೆಗೆ ಕೋರಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಲಾಗದು. ಎಷ್ಟೇ ಸಮಯಬೇಕಿದ್ದರೂ ಇಂದೇ ವಾದ ಮಂಡಿಸುವಂತೆ ಪ್ರತಿವಾದಿಗಳ ಪರ ವಕೀಲ ಹೇಮಂತ್‌ ರಾಜ್‌ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿತು.

ಹೀಗಾಗಿ, ವಾದ ಮಂಡಿಸಿದ ವಕೀಲ ಹೇಮಂತ್‌ ರಾಜ್‌ ಅವರು ಹಾಲಿ ಪ್ರಕರಣದಲ್ಲಿ ಶಾಸಕ ಗೌರಿಶಂಕರ್‌ ಅವರ ಕುಟುಂಬ ಸದಸ್ಯರು ಭಾಗಿಯಾಗಿಲ್ಲ. ಅರ್ಜಿದಾರರು ಹೇಳುತ್ತಿರುವಂತೆ ಇತರೆ ಪ್ರತಿವಾದಿಗಳು ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲ. ನಮ್ಮ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದು ಮೂರು ತಾಸು ವಾದಿಸಿದರು. 3.30ರಿಂದ 6.30ರವರೆಗೂ ಗೌರಿ ಶಂಕರ್‌ ಅವರನ್ನು ಸಮರ್ಥಿಸಿದರಲ್ಲದೇ, ಆರೋಪಗಳನ್ನು ನಿರಾಕರಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಹಿರಾಳ್‌ ಅವರು ಗೌರಿ ಶಂಕರ್‌ ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿಕೊಂಡು ಒಟ್ಟಾಗಿ ಚುನಾವಣಾ ಅಕ್ರಮ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಪ್ರತಿಪಾದಿಸಿದರು.

ಅತ್ಯಂತ ತಾಳ್ಮೆಯಿಂದ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಪೀಠದ ಮುಂದೆ ಹಾಜರುಪಡಿಸಲಾದ ಎಲ್ಲಾ ಸಾಕ್ಷ್ಯಗಳನ್ನೂ ಪರಿಶೀಲಿಸಿದರು.

ಹಾಲಿ ಪ್ರಕರಣದಲ್ಲಿ ಸುರೇಶ್‌ ಗೌಡ ಅವರ ಪರವಾಗಿ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರು ಸಮರ್ಥವಾಗಿ ವಾದ ಮಂಡನೆ ಮಾಡಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಗೌರಿ ಶಂಕರ್‌ ಅವರು 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಜಯ ಸಾಧಿಸಿದ್ದಾರೆ. ಇದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ 123ರ ಅಡಿ ಅಪರಾಧವಾಗಿದೆ. ಹೀಗಾಗಿ, ಗೌರಿ ಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸುರೇಶ್‌ಗೌಡ ಅವರು 2018ರ ಜುಲೈನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣ ಭಿನ್ನ ವಿಚಾರಗಳಿಗಾಗಿ ನಾಲ್ಕು ಬಾರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿಯನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಆದೇಶಿಸುವಂತೆ ಕೋರಿ ಅರ್ಜಿದಾರರೂ ಸಹ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಮೇಲೆ ಸುಪ್ರೀಂ ಕೋರ್ಟ್‌ ವಿಶ್ವಾಸ ವ್ಯಕ್ತಪಡಿಸಿದ್ದರಿಂದ ಸುರೇಶ್‌ ಗೌಡರು ಅರ್ಜಿ ಹಿಂಪಡೆದಿದ್ದರು. ಈಗ ವಿಧಾನಸಭಾ ಚುನಾವಣೆಯ ಹೊಸ್ತಿಲನಲ್ಲಿರುವಾಗ ಪ್ರಕರಣವು ಅಂತಿಮ ಘಟ್ಟಕ್ಕೆ ಬಂದು ತಲುಪಿದಂತಾಗಿದೆ.

ಕಳೆದ ವರ್ಷ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರದ ಕುರಿತ ಅರ್ಜಿಯು ಈಚೆಗೆ ಕರ್ನಾಟಕ ಹೈಕೋರ್ಟ್‌’ನಲ್ಲಿ ತಡರಾತ್ರಿವರೆಗೆ ನಡೆದಿತ್ತು. ಅದನ್ನು ಹೊರತುಪಡಿಸಿದರೆ ಇತ್ತೀಚೆಗೆ ಇಷ್ಟು ಸಮಯದವರೆಗೆ ನಡೆದ ವಿಚಾರಣೆ ಇದಾಗಿದೆ. ಸಾಮಾನ್ಯವಾಗಿ ಹೈಕೋರ್ಟ್‌ ವಿಚಾರಣೆಯು ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ರವರೆಗೆ ಹಾಗೂ ಆ ಬಳಿಕ ಭೋಜನದ ನಂತರ 2.30ರಿಂದ ಸಂಜೆ 4.30ರವರೆಗೆ ಇರುತ್ತದೆ.

ಹಿಂದಿನ ಲೇಖನಭಾರತೀಯ ಕ್ರೀಡಾ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನದಕ್ಷಿಣ ಆಫ್ರಿಕಾದಿಂದ ಗ್ವಾಲಿಯರ್’ಗೆ ಬಂದ 12 ಚೀತಾಗಳು