ಮನೆ ರಾಜ್ಯ ಪ್ರವಾಸಿ ಮಂದಿರ ಉದ್ಘಾಟನೆ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್- ಮಾಜಿ ಎಂಎಲ್ ಸಿ ಸಿ.ರಮೇಶ್ ನಡುವೆ...

ಪ್ರವಾಸಿ ಮಂದಿರ ಉದ್ಘಾಟನೆ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್- ಮಾಜಿ ಎಂಎಲ್ ಸಿ ಸಿ.ರಮೇಶ್ ನಡುವೆ ಮಾತಿನ ಚಕಮಕಿ

0

ಮೈಸೂರು(Mysuru): ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ಅತಿ ಗಣ್ಯರ ಪ್ರವಾಸಿ ಮಂದಿರ ಉದ್ಘಾಟನೆ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್ ಹಾಗೂ  ಸಂಸದ ಶ್ರೀನಿವಾಸ ಪ್ರಸಾದ್ ನಡುವೆ ಬಾರೀ ಮಾತಿನ‌ ವಾಗ್ದಾಳಿ ನಡೆದು ಸಿ.ರಮೇಶ್ ಅವರನ್ನು ಪ್ರವಾಸಿ‌ಮಂದಿರದಿಂದ ಹೊರಗೆ ಕಳುಹಿಸಿದ ವಿಲಕ್ಷಣ ಘಟನೆ ಬುಧವಾರ ನಡೆದಿದೆ.

ತಿ.ನರಸೀಪುರ ಪಟ್ಟಣದ ಹಳೇ ಸಂತೇ ಮಾಳದ ಬಳಿ ತಲಕಾಡು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯು 5.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಉಪ ವಿಭಾಗ ಕಚೇರಿ ಹಾಗೂ ಅತಿ ಗಣ್ಯರ ಪ್ರವಾಸಿ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.

ಉದ್ಘಾಟನೆ ನಂತರ ಅತಿಥಿ ಗೃಹದಲ್ಲಿ  ಸಂಸದರು ಕಟ್ಟಡ ಕಾಮಗಾರಿಯ ವೆಚ್ಚದ ಬಗ್ಗೆ   ಪತ್ರಕರ್ತರಿಗೆ ಮಾಹಿತಿ ನೀಡಲು ಮುಂದಾದ ವೇಳೆ ಸಿ.ರಮೇಶ್ ಕೈಯಲ್ಲಿ ಆಹ್ವಾನ ಪತ್ರಿಕೆ ಹಿಡಿದುಕೊಂಡು ಲೋಕೋಪಯೋಗಿ ಇಲಾಖೆಯ ಎಇಇ ಸರ್ವೇಶ್ ವಿರುದ್ಧ ತೀವ್ರ ವಾಗ್ದಾಳಿಗೆ ಮುಂದಾದರು.

ಒಂದೇ ಆಹ್ವಾನ ಪತ್ರಿಕೆಯಲ್ಲಿ ಇಬ್ಬರ ಹೆಸರನ್ನು ಬರೆದು ಮಾಜಿ ಎಂಎಲ್ ಸಿ ಯಾದ ನನಗೆ ಅವಮಾನ ಮಾಡಿದ್ದೀಯ ಎಂದು ಏರು ದನಿಯಲ್ಲಿ ಅಧಿಕಾರಿಯನ್ನು ಬೈಯಲು ಮುಂದಾದರು.ಇದನ್ನು ಗಮನಿಸಿದ ಶ್ರೀನಿವಾಸ ಪ್ರಸಾದ್ ಅಧಿಕಾರಿಯನ್ನು ಶಿಷ್ಟಾಚಾರದ ಬಗ್ಗೆ ಕೇಳುವ ಹಕ್ಕು ನಿನಗಿಲ್ಲ, ಅವರನ್ನು ಕೇಳಲು ನೀನ್ಯಾರು?ಎಂದು ಸಿ.ರಮೇಶ್ ಮೇಲೆ ಗರಂ ಆದರು.

ಪ್ರಸಾದ್ ರ ಮಾತಿನಿಂದ ಕೆರಳಿದ ರಮೇಶ್ ನಾನೇನು‌ ನಿನ್ನನ್ನು ಕೇಳುತ್ತಲ್ಲ.ಸರ್ಕಾರಿ ಅಧಿಕಾರಿಯನ್ನು ಕೇಳುತ್ತಿದ್ದೇನೆ. ನಾನು‌ ಮಾಜಿ ಶಾಸಕ ನನಗೂ ಕೇಳುವ ಹಕ್ಕಿದೆ ಎಂದು ಪ್ರಸಾದ್ ಗೆ ತಿರುಗೇಟು ನೀಡಿದರು.

ಇದರಿಂದ ಕೋಪಗೊಂಡ ಪ್ರಸಾದ್ ನೀನು ಹೆಚ್ಚು ಮಾತಾಡಬೇಡ.ನೀನೇನು ಎಂದು ನನಗೆ ಗೊತ್ತಿದೆ ಆಚೆ ಹೋಗು ಎಂದು ರೇಗಿದರು.ಇಲ್ಲೇನು ಕೀಟಲೆ ಮಾಡಲು ಬಂದಿದ್ದೀಯ ಎನ್ನುತಿದ್ದಂತೆ ಪ್ರತಿಯಾಗಿ ಮಾತನಾಡಿದ ರಮೇಶ್ ನಾವೂ ಪಕ್ಷದ ಕಾರ್ಯಕರ್ತರೇ ನೀವು ಈ ರೀತಿಯೆಲ್ಲಾ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಲು ಮುಂದಾದರು.

ಈ ವೇಳೆ ಕಾರ್ಯ ಕರ್ತರು ಸಿ.ರಮೇಶ್ ರನ್ನು ಸಮಾದಾನ ಪಡಿಸಿ ಕುಳಿತುಕೊಳ್ಳುವಂತೆ ಮನವಿ ಮಾಡಿದರಾದರೂ ಅವರ ಮೇಲೂ ರೇಗಾಡಿಕೊಂಡರು.ಸಿ.ರಮೇಶ್ ರವರ ನಡೆಯನ್ನು ಗಮನಿಸಿದ ಪ್ರಸಾದ್ ಮತ್ತಷ್ಟು ಕೆರಳಿ ಅವನನ್ನು ಆಚೆಗೆ ಕಳುಹಿಸಿ ಎಂದು ಕೋಪದ್ರಿಕ್ತರಾದರು.

ನೀವು ಸಂಸದರಾಗಿದ್ದೀರಿ ಎಂದು ಏನನ್ನೋ ಮಾತನಾಡಬೇಡಿ ಪಕ್ಷದಲ್ಲಿ ನಾವೇನೂ ‌ಮಾಡಿಲ್ಲವೇ ನೀವೊಬ್ಬರೇ ಸಂಸದರಾಗಿಬಿಟ್ಟಿರಾ ಎಂದು ವಾಗ್ದಾಳಿ ನಡೆಸಿ ನಮಗೆ ಪಾರ್ಟಿಯೇ ಬೇಡ ಎಂದು ಹೊರಗೆ ಹೊರಡಲು ಮುಂದಾದ ಸಿ.ರಮೇಶ್ ರವರನ್ನು ಕಾರ್ಯಕರ್ತರು ಕೂರುವಂತೆ ಮನವಿ ಮಾಡಿದ ವೇಳೆ ಹೇ ಹೋಗ್ಲಿ ಬಿಡ್ರಿ ಎಂದರು.

ಆ ವೇಳೆ ನೀ ಹೇಳಿದರೂ ನಾನಿಲ್ಲಿ ಕೂರುವುದಿಲ್ಲ. ನೀನು ಪಕ್ಷವೇ ಇಲ್ಲದೇ ಎಂಪಿ ಆಗಿದ್ದೀಯ, ನಿನೋಬ್ಬನೇ ದೊಡ್ಡೋನೋ ಉಳಿದೋರೆಲ್ಲಾ ನಿನ್ನ ಮುಂದೆ ಏನು ಇಲ್ಲ ಎಂದು ವ್ಯಂಗ್ಯವಾಡಿ ದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್ ಹೇ ಆಯ್ತು ಹೋಗಪ್ಪ, ನೀವೆಲ್ಲಾ ಬರೀ ಬ್ಲಾಕ್ ಮೇಲ್ ಮಾಡಲೆಂದೇ ಬರುತ್ತೀರಾ ಎಂದು ಕಾಣುತ್ತೆ ಎಂದ ಮಾತಿನಿಂದ ಕೆರಳಿದ ಸಿ.ರಮೇಶ್ ಈ ಮಾತನ್ನೆಲ್ಲಾ ಬಿಟ್ಟು ಬಿಡಿ ನಿಮಗೆ ತಾಕತ್ತಿದ್ದರೆ ನೀವು ಇದ್ದ ಪಕ್ಷದಲ್ಲೇ ಎಂಪಿ ಆಗಬೇಕಿತ್ತು.ಬಿಜೆಪಿಗೆ ಯಾಕೆ ಬಂದಿದ್ದೀರಿ ಎಂದು ಮರು ವಾಗ್ದಾಳಿ ನಡೆಸಿದರು.

ಇದರಿಂದ ಕೆರಳಿದ ಸಂಸದರು ಹೇ ಹೋಗಪ್ಪಾ ಹೊರಗೆ ಎಂದು ತಾಕೀತು ಮಾಡಿದರು. ನಾನೇನು ನಿಮ್ಮ ಮನೆಗೆ ಬಂದಿಲ್ಲ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದೀನಿ. ಸರ್ಕಾರಿ ಅಧಿಕಾರಿಗೆ ನಾನಿಲ್ಲಿ ಇರುವುದು ಇಷ್ಟ ಇಲ್ಲ ಎಂದು ಕಾಣುತ್ತಿದೆ ಹಾಗಾಗಿ ಹೋಗುತ್ತೇನೆ ಎಂದು ಹೊರ ನಡೆದರು.