ಮನೆ ರಾಜ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮ:  ಪ್ರೇಕ್ಷಕರನ್ನು ರಂಜಿಸಿದ ಗಾನಸುಧೆ

ದಸರಾ ಸಾಂಸ್ಕೃತಿಕ ಕಾರ್ಯಕ್ರಮ:  ಪ್ರೇಕ್ಷಕರನ್ನು ರಂಜಿಸಿದ ಗಾನಸುಧೆ

0

ಮೈಸೂರು(MYsuru):  ನಾಡಹಬ್ಬ ದಸರೆಯ ಪ್ರಮುಖ  ಆಕರ್ಷಣೆಯಲ್ಲಿ  ಒಂದಾದ  ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ ದೊರೆಯಿತು.

ಹೊಂಬಣ್ಣದಲ್ಲಿ ಕಂಗೊಳಿಸುತ್ತಿದ್ದ ಅರಮನೆಯ ಆವರಣದ ಮುಂಭಾಗದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ನೃತ್ಯ–ಸಂಗೀತ ಕಾರ್ಯಕ್ರಮಗಳು ಗರಿಗೆದರಿದವು.

ಮೈಸೂರಿನ ಹಿರಿಯ ಗಾಯಕಿ ಎಚ್‌.ಆರ್‌.ಲೀಲಾವತಿ ಹಾಗೂ ತಂಡದವರು ಸುಗಮ ಸಂಗೀತದ ಗಾನಸುಧೆ ಹರಿಸಿ ಪ್ರೇಕ್ಷಕರನ್ನು ರಂಜಿಸಿದರು.

ಹೆಚ್.ಆರ್.ಲೀಲಾವತಿ ಮತ್ತು ತಂಡದವರು ಹಾಡಿದ ಬೆಂಗಾಲಿ ಮೂಲದ ಭಕ್ತಿಗೀತೆ ಜಿ.ಎಸ್.ಶಿವರುದ್ರಪ್ಪ ಅವರು ಅನುವಾದಿಸಿದ `ನಮೋ ಗೌರಿ’ , ಹಿರಿಯ ಕವಿ ದೊಡ್ಡ ರಂಗೇಗೌಡ ವಿರಚಿತ ಗೀತೆ `ಮೈಸೂರು ರಂಗಾಗೈತೋ’ , ಹಿರಿಯ ಗಾಯಕಿ ಹೆಚ್.ಆರ್.ಲೀಲಾವತಿ ಅವರು ರಚಿಸಿ ರಾಗ ಸಂಯೋಜಿಸಿದ ಗೀತೆ `ಹಾಡಾಗಿ ಹರಿದಾಳೆ’ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಅವರ `ಬಾ ಒಲವೆ’  ಗೀತೆಗಳು ನೆರೆದಿದ್ದ ಜನರ ಮನಸೂರೆಗೊಂಡವು.

ಇದಕ್ಕೂ ಮುನ್ನ ಅಮೃತ ಭಾರತಿಗೆ ಕನ್ನಡದಾರತಿ: ಬೆಂಗಳೂರಿನ ಮಂಜುಳಾ ಪರಮೇಶ್‌ ನೇತೃತ್ವದ ಸಪ್ತಸ್ವರ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌ ತಂಡದವರು ‘ಅಮೃತ ಭಾರತಿಗೆ ಕನ್ನಡದಾರತಿ’ ನೃತ್ಯರೂಪಕ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸೇನಾನಿಗಳು ನೀಡಿದ ಕೊಡುಗೆ, ತ್ಯಾಗ–ಬಲಿದಾನ, ಸ್ವಾತಂತ್ರ್ಯ ಚಳವಳಿಗೆ ಕರುನಾಡು ನೀಡಿದ ಕೊಡುಗೆ, ನಮ್ಮಲ್ಲಿನ ವೀರಯೋಧರು ಮೊದಲಾದವರ ಸ್ಮರಣೆಯನ್ನು ನೃತ್ಯರೂಪಕ ವೇದಿಕೆಗೆ ತಂದಿತು. ಕಲಾವಿದರು–ಕಲಾವಿದೆಯರು ನಾಡಿನ ಶೌರ್ಯ–ಸಾಹಸ ಬಿಂಬಿಸುವ ಇತಿಹಾಸವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು. ಯದುನಾಥ್ ಮತ್ತು ಗುರುರಾಜ್‌ ತಂಡದವರು ನಾದಸ್ವರ, ಕಿರಾಳು ಮಹೇಶ್ ಮತ್ತು ತಂಡದವರು ವೀರಭದ್ರ ಕುಣಿತವನ್ನು ಪ್ರದರ್ಶಿಸಿದರು.

ಇದರೊಂದಿಗೆ, ಅರಮನೆ ಆವರಣ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಂಗೀತ ಸಭಾ, ಚಿಕ್ಕಗಡಿಯಾರ, ಪುರಭವನ, ಕಲಾಮಂದಿರದ ಕಿರು ರಂಗಮಂದಿರ, ನಂಜನಗೂಡಿನ ಆರ್‌.‍ಪಿ.ರಸ್ತೆಯ ಅರಮನೆ ಮಾಳದ ವೇದಿಕೆಗಳಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಡಗರ ವಿಧ್ಯುಕ್ತ ಆರಂಭ ಕಂಡಿತು.ಅ.3ರವರೆಗೆ ಈ ವೇದಿಕೆಗಳಲ್ಲಿ ನಾಡಿನ ವಿವಿಧ ಭಾಗದ ಕಲಾವಿದರಿಂದ ಪ್ರತಿಭೆಯ ಹೊನಲು ಹರಿಯಲಿದೆ.

ದಸರಾ ಸಾಂಸ್ಕೃತಿಕ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವು ಸಂಗೀತ–ಕಲೆಗಳ ರಸಿಕರಿಗೆ ರಸದೌತಣವನ್ನು ಉಣಬಡಿಸಿತು. ಒಂದೆಡೆ ಪುಷ್ಪ ಪ್ರದರ್ಶನ ಹಾಗೂ ಇನ್ನೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್‌ ಪ್ರೇಕ್ಷಕರಿಗೆ ಮುದ ನೀಡಿತು.ಅರಮನೆ ಆವರಣದ ವರಾಹ ದ್ವಾರದ ಬಳಿ ಸಜ್ಜುಗೊಳಿಸಿರುವ ಪುಷ್ಪ ಪ್ರದರ್ಶನವೂ ಜನರನ್ನು ಆಕರ್ಷಿಸಿತು.