ಮೈಸೂರು(Mysuru): ದಸರಾ ಮಹೋತ್ಸವದ ಪ್ರಯುಕ್ತ ಪ್ರವಾಸಿಗರನ್ನು ನಗರದತ್ತ ಸೆಳೆಯಲು ಹಾಗೂ ನಗರವನ್ನು ಇನ್ನು ಸುಂದರಗೊಳಿಸಲು ವಿದ್ಯುತ್ ದೀಪಾಲಂಕಾರ ಮಾಡಿದ್ದ ಸೆಸ್ಕ್‌ಗೆ ಬರೋಬ್ಬರಿ 5.5 ಕೋಟಿ ರೂ. ವೆಚ್ಚವಾಗಿದೆ.
4.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸೆಸ್ಕ್‌ಗೆ ಮತ್ತೆ 1 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಅವಧಿ ವಿಸ್ತರಣೆಯೊಂದಿಗೆ ಹೆಚ್ಚು ದಿನಗಳ ಕಾಲ ದೀಪಾಲಂಕಾರದ ವ್ಯವಸ್ಥೆ ಇದ್ದ ಪರಿಣಾಮ 2.3 ಲಕ್ಷ ಕಿಲೋವ್ಯಾಟ್ ವಿದ್ಯುತ್ ಬಳಕೆಯಾಗಿದೆ.
ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದರಿಂದ ಸಾರ್ವಜನಿಕರ ಕೋರಿಕೆಯ ಮೇರೆಗೆ ಸೆಸ್ಕ್ ಅಧಿಕಾರಿಗಳು ದೀಪಾಲಂಕಾರವನ್ನು ವಿಸ್ತರಿಸಿದ್ದರು.
ದಸರಾ ಉದ್ಘಾಟನೆಯಾದ ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ಮೊದಲು ನಿಗದಿಯಾಗಿತ್ತು. ನಂತರ ಕೋರಿಗೆ ಮೇರೆಗೆ ಅ.10ರವರೆಗೆ ವಿಸ್ತರಿಸಲಾಯಿತು. ಬೇಡಿಕೆ ಹೆಚ್ಚಿದಾಗ ಇನ್ನೂ ಎರಡು ದಿನ (ಅ.12)ದೀಪಾಲಂಕಾರವನ್ನು ವಿಸ್ತರಿಸಿದ್ದರು.
ಇದರಿಂದ 15 ದಿನಗಳಿಗೆ ಅಂತ್ಯಗೊಳ್ಳಬೇಕಿದ್ದ ದೀಪಾಲಂಕಾರ 17 ದಿನಗಳ ಕಾಲ ನಡೆಸುವ ಮೂಲಕ ಸಾರ್ವಜನಿಕರ ಮನಸೂರೆಗೊಳ್ಳುವ ಪ್ರಯತ್ನವನ್ನು ಸೆಸ್ಕ್ ಮಾಡಿತ್ತು.