ಮನೆ ರಾಜ್ಯ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು: ಸಿಎಂ ಬೊಮ್ಮಾಯಿ

ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು​ ಹತ್ಯೆಯಾಗಿರುವ ಸಂದರ್ಭದಲ್ಲಿ ಸಾಧನಾ ಸಮಾವೇಶ ಮಾಡಲು ನನ್ನ ಮನಸಾಕ್ಷಿ ಒಪ್ಪದ ಕಾರಣ ‘ಜನೋತ್ಸವ ಕಾರ್ಯಕ್ರಮ’ವನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರ್.ಟಿ.ನಗರ ನಿವಾಸದಲ್ಲಿ ಸರಿರಾತ್ರಿ 12.25ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಯಡಿಯೂರಪ್ಪನವರು ತಂದಿರುವ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಹಲವು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ಕೊಡಬೇಕೆನ್ನುವ ಹಂಬಲ ನಮ್ಮದು. ಇದೇ ಕಾರಣಕ್ಕೆ ಜನೋತ್ಸವ ಮಾಡಲು ಉದ್ದೇಶಿಸಿದ್ದೆವು. ಜನಪರವಾಗಿ ನಾವೇನು ಕೆಲಸ ಮಾಡಿದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಬೇಕಿತ್ತು. ಸಂಭ್ರಮಿಸಲು ಅಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು.

ಹತ್ಯೆಯಾದ ಆ ಹುಡುಗನ ತಾಯಿಯ ಆಕ್ರಂದನ, ಪತ್ನಿಯ ಆಕ್ರಂದನ ಹಾಗೂ ಹರ್ಷನ ತಾಯಿಯ ನೋವನ್ನ ನೋಡಿ ಈ ಸಂದರ್ಭದಲ್ಲಿ ನಾವು ಯಾವುದೇ ರೀತಿಯ ಕಾರ್ಯಕ್ರಮ ಮಾಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ, ದೊಡ್ಡಬಳ್ಳಾಪುರದ ಕಾರ್ಯಕ್ರಮವನ್ನು ನಾನು ರದ್ದು ಮಾಡಿದ್ದೇನೆ, ನಮ್ಮ ಪಕ್ಷವೂ ಕಾರ್ಯಕ್ರಮ ರದ್ದು ಮಾಡಿದೆ ಮತ್ತು ವಿಧಾನಸೌಧದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮವನ್ನು ಕೂಡ ರದ್ದು ಮಾಡಿದ್ದೇವೆ.

ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ರಚನೆ: ಅಮಾಯಕರನ್ನು ಕೊಲ್ಲುವ ಯಾವುದೇ ಸಂಘಟನೆಯನ್ನು ಸಂಪೂರ್ಣವಾಗಿ ನಾಶ ಮಾಡಲು, ವಿಶೇಷ ತರಬೇತಿ ಪಡೆದ ಆ್ಯಂಟಿ ಟೆರರಿಸ್ಟ್ ಕಮಾಂಡೋ ಸ್ಕ್ವಾಡ್ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

ಸಂಘಟನೆ ನಿಷೇಧಕ್ಕೆ ಮಾಹಿತಿ ಸಂಗ್ರಹ: ಛತ್ತೀಸ್​ಗಢ ಸರ್ಕಾರ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿತ್ತು. ಕೇವಲ ಒಂದು ತಿಂಗಳಲ್ಲಿ ಆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತು. ಹಾಗಾಗಿ, ನಾವು ಆತುರದ ನಿರ್ಧಾರ ಕೈಗೊಳ್ಳುತ್ತಿಲ್ಲ. ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಸೂಕ್ತ ದಾಖಲಾತಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಹಿಂದಿನ ಲೇಖನಗಡಿ ಭದ್ರತಾ ಪಡೆಯಲ್ಲಿ 323 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಚಾಮರಾಜನಗರ: ಜಮೀನಿನಲ್ಲಿದ್ದ ಹೆಬ್ಬಾವು ರಕ್ಷಣೆ