ಮೈಸೂರು(Mysuru): ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಾಗಲಿಂಗಪ್ಪ ಬಡಿಗೇರ್ ತಂಡದ ಏಳು ಜನರು ಚಿತ್ರಬಿಡಿಸುವ ಮೂಲಕ ಅಲಂಕಾರ ಮಾಡಿದರು.
ಅರಮನೆ ಆವರಣದಲ್ಲಿನ ಆನೆಗಳ ಶಿಬಿರದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಯವರೆಗೆ ಆನೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸುವ ಕಾರ್ಯ ನಡೆದಿತ್ತು. ಮಂಗಳವಾರ ರಾತ್ರಿ 10.30ಕ್ಕೆ ಆರಂಭವಾದ ಈ ಕಲಾತ್ಮಕ ಕೆಲಸ ಮೆರವಣಿಗೆಯ ದಿನದ ಬೆಳಗ್ಗೆ 11ರವರೆಗೂ ಮುಂದುವರಿದಿತ್ತು.
ಎಲ್ಲಾ ಆನೆಗಳು ಚಿತ್ತಾರ ಬರೆಸಿಕೊಂಡು ಪೋಸ್ ನೀಡುತ್ತಿದ್ದರೆ, ಜಂಬೂ ಸವಾರಿ ನಾಯಕ ಅಭಿಮನ್ಯುವಿಗೆ ಕೊನೆಯಲ್ಲಿ ಚಿತ್ರ ಬರೆಯಲು ಆರಂಭಿಸಲಾಯಿತು. ಹೀಗೆ ಈ ಹದಿಮೂರು ಆನೆಗಳ ಸಿಂಗಾರಕ್ಕಾಗಿ ಮೆರವಣಿಗೆಯ ಹಿಂದಿನ ರಾತ್ರಿಯಿಂದ ಜಂಬೂಸವಾರಿ ಆರಂಭವಾಗುವ ಕಡೇ ಕ್ಷಣದವರೆಗೂ ಶ್ರಮಿಸಿದರು.
ನೈಸರ್ಗಿಕ ಬಣ್ಣ ಬಳಕೆ: ದಸರಾ ಆನೆಗಳ ಮೇಲೆ ಚಿತ್ರ ಬರೆಯುವುದಕ್ಕೆ ಬಳಸುವ ಬಣ್ಣಗಳಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ನೀಡದಂತಹ ನೈಸರ್ಗಿಕ ಬಣ್ಣ ಬಳಸಲಾಗಿದೆ. ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳ ಉಗುರಿಗೆ ಸ್ವರ್ಣ ಬಣ್ಣ ಹಚ್ಚಲಾಗಿತ್ತು. ಸೊಂಡಿಲ ಮೇಲಿರುವ ಬಿಳಿ ಮಚ್ಚೆಗಳಿಗೆ ಕಣ್ಣು ಬಣ್ಣದ ಲೇಪನ ಮಾಡಲಾಗಿತ್ತು. ಅಂತಿಮವಾಗಿ ಆನೆಗಳ ಮೇಲೆ ನಾಮ ಮತ್ತು ಗಾದಿ ಹಾಕಿ, ರೇಷ್ಮೆ ವಸ್ತ್ರ ಹೊದಿಸಲಾಯಿತು.
ಚಿತ್ರ ಬಿಡಿಸುವಾಗ ಆನೆಗಳು ಸದಾ ಕಿವಿ ಬಡಿಯುತ್ತಾ ಸೊಂಡಿಲು ಮತ್ತು ಬಾಲ ಅಲ್ಲಾಡಿಸುತ್ತಲೇ ಇದ್ದವು. ಚಿತ್ರಕಾರರು ಇದನ್ನೆಲ್ಲ ಸಂಭಾಳಿಸುತ್ತಾ, ಸಾಕಷ್ಟು ತಾಳ್ಮೆಯಿಂದ ಚಿತ್ರ ಬಿಡಿಸಿದರು.