ಕೊರಟಗೆರೆ: ತೋಟದ ಮನೆಯ ಹಿಂಭಾಗ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ನೇತೃತ್ವದ ಪೊಲೀಸರ ತಂಡ ಇತ್ತೀಚಿಗೆ ದಾಳಿ ನಡೆಸಿ 1 ಲಕ್ಷ 10 ಸಾವಿರ ನಗದು ಮತ್ತು 8 ಜನ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಳವನಹಳ್ಳಿ ಮತ್ತು ದುಗ್ಗೇನಹಳ್ಳಿ ಗ್ರಾಮದ ಅಲೀಂವುಲ್ಲಾ, ರಮೇಶ, ರಾಮಾಂಜನೇಯ, ಕುಮಾರ, ರಾಮಕೃಷ್ಣ, ಚಾಂದುಪಾಷ, ರಾಮು ಮತ್ತು ಹನುಮಂತರಾಜು ಬಂಧಿತ ಆರೋಪಿಗಳು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾ.ಪಂ. ಕೇಂದ್ರ ಸ್ಥಾನದಿಂದ ಕೇವಲ 2 ಕಿ.ಮೀ. ದೂರದಲ್ಲಿನ ಮೆಹಬೂಬ್ ಷರೀಪ್ ಎಂಬಾತನ ತೋಟದ ಮನೆಯ ಆವರಣದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ಕೊರಟಗೆರೆ ಪೊಲೀಸರ ತಂಡ ದಾಳಿ ನಡೆಸಿದ್ದಾರೆ.
ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಬಂಧಿತ 8 ಜನ ಆರೋಪಿಗಳಿಂದ 1,10,520 ರೂ. ನಗದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಹೊಳವನಹಳ್ಳಿ ಗ್ರಾ.ಪಂ.ನ ಮಾಜಿ ಅಧ್ಯಕ್ಷೆಯ ಪತಿ, ಹಾಲಿ ಉಪಾಧ್ಯಕ್ಷ ಮತ್ತು ಮಾಜಿ ಸದಸ್ಯರೇ ಇಸ್ಪೀಟ್ ಆಟದ ವೇಳೆ ಸಿಕ್ಕಿ ಬಿದ್ದಿರುವುದು ವಿಪರ್ಯಾಸ. ಕಾನೂನು ಸುವ್ಯವಸ್ಥೆ ಮತ್ತು ಜನರಿಗೆ ಆದರ್ಶ ಆಗಬೇಗಿದ್ದ ಸದಸ್ಯರೇ ಈಗ ಪೊಲೀಸರ ಅತಿಥಿ ಆಗಿರುವುದು ಗ್ರಾ.ಪಂ.ಗೆ ನಿಜವಾದ ಮುಜುಗರ. ಕಾನೂನಿನ ಮುಂದೇ ಯಾರು ದೊಡ್ಡವರಲ್ಲ ಎಂಬುದಕ್ಕೆ ಕೊರಟಗೆರೆ ಪೊಲೀಸರ ಕೆಲಸವೇ ಸಾಕ್ಷಿ.
ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ ಕುಮಾರ್ ನೇತೃತ್ವದ ಪೊಲೀಸರ ತಂಡದಿಂದ ದಾಳಿ ನಡೆದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ.