ಹಾಸನ (Hassan): ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 4:30ರ ಸುಮಾರಿಗೆ ಭೂಮಿ ಕಂಪನವಾಗಿದೆ. 10 ಸೆಕೆಂಡ್ ಭೂಮಿ ಕಂಪಿಸಿದೆ.
ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಮನೆಗಳು ಹಾಗೂ ರಸ್ತೆ ಮನೆಗಳು ಬಿರುಕುಬಿಟ್ಟಿದ್ದು, ಮಲಗಿದ್ದವರು ತಕ್ಷಣ ಮನೆಯಿಂದ ಹೊರಗೆ ಬಂದಿದ್ದಾರೆ.
ಭೂಮಿ ಕಂಪಿಸಿದಾಗ ಮನೆಯಲಿದ್ದ ಪಾತ್ರೆಗಳು ಹಾಗೂ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಟ್ಟ ಸಾತನಹಳ್ಳಿ, ಹಳ್ಳಿಮೈಸೂರು, ಕಲ್ಲಹಳ್ಳಿ, ದಾಳ ಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಬೆಳವಾಡಿ, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಚಿಟ್ಟನಹಳ್ಳಿ ಬಡಾವಣೆ , ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ. ಮೇಲ್ನೋಟಕ್ಕೆ ದೊಡ್ಡಕಾಡನೂರು ಹಾಗೂ ದಾಳ ಗೌಡನಹಳ್ಳಿ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಲೇ ಭೂಕಂಪನವಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.