ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಸುತ್ತಮುತ್ತಲ ಪ್ರದೇಶದಲ್ಲಿ ಇಂದು ಬೆಳಗ್ಗೆ 5:36ಕ್ಕೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ದಿಢೀರ್ ಕಂಪನದಿಂದ ಆತಂಕಗೊಂಡ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್‌ನ ಬಹಮಹಡಿ ಕಟ್ಟಡಗಳ ನಿವಾಸಿಗಳು ಹೊರಗೆ ಓಡಿ ಬಂದಿದ್ದರು.
“ಕಂಪನ ಸಂಭವಿಸಿದ ಪ್ರದೇಶ ನವದೆಹಲಿಯ ಸುಮಾರು 4 ಕಿ.ಮೀ ಆಳದಲ್ಲಿತ್ತು. ಇದರ ಕೇಂದ್ರಬಿಂದು ದೌಲಾಕೌನ್ ಪ್ರದೇಶದ ದುರ್ಗಾಬಾಯಿ ದೇಶ್‌ಮುಖ್ ವಿಶೇಷ ಶಿಕ್ಷಣ ಕಾಲೇಜು ಸಮೀಪ ದಾಖಲಾಗಿದೆ. ಭಾರೀ ಶಬ್ದ ಕೇಳಿಸಿತು. ಈ ಪ್ರದೇಶದ ಸಮೀಪ ಸರೋವರವಿದೆ. ಇಲ್ಲಿ ಪ್ರತೀ 2-3 ವರ್ಷಗಳಿಗೊಮ್ಮೆ ಕಡಿಮೆ ತೀವ್ರತೆಯ ಲಘು ಭೂಕಂಪನಗಳು ಆಗುತ್ತಿರುತ್ತವೆ. 2015ರಲ್ಲೂ 3.3 ತೀವ್ರತೆಯ ಕಂಪನ ಸಂಭವಿಸಿತ್ತು” ಎಂದು ಕೇಂದ್ರದ ಅಧಿಕಾರಿ ಹೇಳಿದರು.
ನೊಯ್ಡಾ ಸೆಕ್ಟರ್ ಇ ಬ್ಲಾಕ್‌ನಲ್ಲಿ 50 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಬೆಳಗಿನ ವಾಕ್‌ಗೆ ಬಂದವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ನಾವು ಬೆಳಗಿನ ವಾಕ್‌ಗೆಂದು ಪಾರ್ಕ್‌ಗೆ ಬಂದಿದ್ದೆವು. ಹಾಗಾಗಿ ನಮಗೆ ಅಷ್ಟು ತೀವ್ರ ಸ್ವರೂಪದ ಕಂಪನದ ಅನುಭವವಾಗಿಲ್ಲ. ಆದರೆ ಕಂಪನ ಸ್ವಲ್ಪ ಪ್ರಬಲವಾಗಿಯೇ ಇತ್ತು. ಜನರು ಕಟ್ಟಡಗಳಿಂದ ಹೊರ ಬಂದಿದ್ದನ್ನು ಕಂಡೆ” ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮನವಿ: ದೆಹಲಿ ಮತ್ತು ಸುತ್ತಮುತ್ತ ಭೂಕಂಪನವಾಗಿದೆ. ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಎಲ್ಲರೂ ಶಾಂತವಾಗಿ ಮತ್ತು ಜಾಗೃತರಾಗಿರಬೇಕು. ಭೂಕಂಪನದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.














