ಮುಂಬಯಿ: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ) ಬಿಗ್ ಬಾಸ್ ಓಟಿಟಿ-2 ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಇತ್ತೀಚೆಗೆ ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಎಲ್ವಿಶ್ ಯಾದವ್ ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇದಾದ ಬಳಿಕ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಪೊಲೀಸರು 1200 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು.
ಇದೀಗ ರೇವ್ ಪಾರ್ಟಿ ಆಯೋಜಿಸಲು ಎಲ್ವಿಶ್ ಯಾದವ್ ಹಾಗೂ ಇತರರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರೆಂದು ಅಕ್ರಮ ಹಣ ವರ್ಗಾವಣೆ (PMLA) ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ಮಾಡಿ ದೂರು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಎಲ್ವಿಶ್ ಯಾದವ್ ಮತ್ತು ಇತರೆ ಕೆಲವರನ್ನು ತನಿಖೆಯ ಭಾಗವಾಗಿ ವಿಚಾರಣೆ ನಡೆಸಲಾಗುವುದು ಎಂದು ವರದಿ ತಿಳಿಸಿದೆ.
ವಿಚಾರಣೆಗೆ ಬರುವಂತೆ ಎಲ್ವಿಶ್ ಯಾದವ್ ಗೆ ಇ.ಡಿ ಸಮನ್ಸ್ ನೀಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.