ಬೆಂಗಳೂರು: ಪ್ರೀತಿಯಿಂದ ಸಾಕಿದ ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೃಷ್ಣಮೂರ್ತಿ(81) ಹಾಗೂ ರಾಧಾ(74) ಮೃತ ದುರ್ದೈವಿಗಳು.
ಕೃಷ್ಣಮೂರ್ತಿ ಹಾಗೂ ರಾಧಾ ದಂಪತಿ 2021ರಲ್ಲಿ ಸೊಸೆ ಮಾಡಿದ ಅಡುಗೆ ಇಷ್ಟವಾಗುತ್ತಿಲ್ಲ. ಮನೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ಕೇಳಿದ್ದಾರೆ. ಈ ವೇಳೆ ಮಗ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಆ ಬಳಿಕ ಅದೇನಾಯ್ತೋ ಗೊತ್ತಿಲ್ಲ 2023ರಲ್ಲಿ ತಂದೆ ತಾಯಿಯನ್ನು ಮತ್ತೆ ಮನೆಗೆ ವಾಪಾಸ್ ಕರೆದುಕೊಂಡು ಹೋಗಿದ್ದಾರೆ.
ಇದೀಗ ಮತ್ತೆ ಮನೆಯಲ್ಲಿ ಹೊಂದಾಣಿಕೆಯಾಗದ ಕಾರಣ ಮಗ ಬೆಂಗಳೂರಿನ ಜೆಪಿ ನಗರದಲ್ಲಿರುವಂತ 8ನೇ ಹಂತದಲ್ಲಿನ ವೃದ್ಧಾಶ್ರಮಕ್ಕೆ ತಂದೆ-ತಾಯಿಯನ್ನು ಮತ್ತೆ ಸೇರಿಸಿದ್ದಾರೆ. ಇದರಿಂದ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.















