ಮನೆ ರಾಷ್ಟ್ರೀಯ ಜ್ಞಾನವಾಪಿ ಮಸೀದಿ: ಶಿವಲಿಂಗ ರಕ್ಷಿಸಿ, ನಮಾಜ್‌ ಗೆ ಅಡ್ಡಿಪಡಿಸಬೇಡಿ; ಸುಪ್ರೀಂ ಕೋರ್ಟ್‌

ಜ್ಞಾನವಾಪಿ ಮಸೀದಿ: ಶಿವಲಿಂಗ ರಕ್ಷಿಸಿ, ನಮಾಜ್‌ ಗೆ ಅಡ್ಡಿಪಡಿಸಬೇಡಿ; ಸುಪ್ರೀಂ ಕೋರ್ಟ್‌

0

ನವದೆಹಲಿ (New Delhi)-ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರದೇಶವನ್ನು ರಕ್ಷಿಸಬೇಕು. ಜತೆಗೆ, ಮುಸ್ಲಿಮರು ನಮಾಜ್ ಮಾಡುವುದಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜ್ಞಾನವಾಪಿ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಪಿ.ಎಸ್. ನರಸಿಂಹ ಅವರಿದ್ದ ನ್ಯಾಯಪೀಠವು ಶಿವಲಿಂಗ ಪತ್ತೆಯಾಗಿರುವ ಪ್ರದೇಶವನ್ನು ರಕ್ಷಿಸುವುದರ ಜೊತೆಗೆ ಮುಸ್ಲಿಂರಿಗೆ ನಮಾಜ್ ಮಾಡುವುದಕ್ಕೆ ಅಡ್ಡಿಪಡಿಸಬಾರದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ನಿರ್ದೇಶನ ನೀಡಿದೆ.

ಶಿವಲಿಂಗ ಪತ್ತೆಯಾಗಿರುವ ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಲು ಮತ್ತು ಮುಸ್ಲಿಮರ ಪ್ರವೇಶವನ್ನು ನಿಷೇಧಿಸಿ ವಿಚಾರಣಾ ನ್ಯಾಯಾಲಯ ಮೇ 16ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸಲು ಪೀಠ ಸೂಚಿಸಿತು.

ವಾರಾಣಸಿಯ ಸ್ಥಳೀಯ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂಬ ವಕೀಲ ಹುಜೆಫಾ ಅಫ್ಮದಿ ಅವರ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.

ವಾರಾಣಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವುದು ಮಾಲೀಕತ್ವಕ್ಕೆ ಸಂಬಂಧಿಸಿದ ದಾವೆಯಲ್ಲ. ಬದಲಿಗೆ ‘ಶೃಂಗಾರ ಗೌರಿ’ ಪೂಜೆಗೆ ತಡೆಯಾಜ್ಞೆ ನೀಡುವುದಕ್ಕೆ ಸಂಬಂಧಿಸಿದ್ದು ಎಂದು ಪೀಠ ಹೇಳಿದೆ.

ಮಸೀದಿ ಆವರಣದಲ್ಲಿ ವಿಡಿಯೋ ಸಮೀಕ್ಷೆ ಮಾಡಲು ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶವನ್ನು ವಾರಾಣಸಿಯ ಅಂಜುಮಾನ್ ಇ ಇಂತೆಜಾಮಿಯಾ ಮಸೀದಿಯ ಆಡಳಿತ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಬಳಿಕ ಮೇ 14, 15 ಹಾಗೂ 16ರಂದು ಸಮೀಕ್ಷೆ ನಡೆದಿತ್ತು. ಇದೇ ವೇಳೆ ಮಸೀದಿಯೊಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಬಣದ ವಕೀಲರೊಬ್ಬರು ಹೇಳಿದ್ದರು.

ಹಿಂದಿನ ಲೇಖನರಾಜ್ಯದಲ್ಲಿ 109 ಮಂದಿಗೆ ಕೋವಿಡ್‌ ಪಾಸಿಟಿವ್
ಮುಂದಿನ ಲೇಖನಮತಾಂತರ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ