ನವದೆಹಲಿ : ಚುನಾವಣಾ ಆಯೋಗವು ಗುರುವಾರ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂಗೆ ‘ವಿಷಲ್’ ಚಿಹ್ನೆಯನ್ನು ನೀಡಿದೆ. ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಚಿಹ್ನೆಯಾಗಿ ಇದನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯನ್ನು ಆಧರಿಸಿದ ಪ್ರಣಾಳಿಕೆಯನ್ನು ರೂಪಿಸಲು ಟಿವಿಕೆ ಮಂಗಳವಾರ ಚೆನ್ನೈನಲ್ಲಿ ತನ್ನ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆಯನ್ನು ಕರೆದ ಕೇವಲ ಎರಡು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಜನವರಿ 16 ರಂದು, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಪಕ್ಷದ ಚುನಾವಣಾ ಪ್ರಚಾರ ಚಟುವಟಿಕೆಗಳನ್ನು ಸಂಘಟಿಸಲು ವಿಜಯ್ 12 ಸದಸ್ಯರ ಸಮಿತಿಯನ್ನು ರಚಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಾಮಾಜಿಕ ನ್ಯಾಯದ ಆಧಾರಸ್ತಂಭದ ಮೇಲೆ ನಿರ್ಮಿಸಲಾಗುವುದು ಮತ್ತು ಮಾರ್ಗಸೂಚಿಯು ಸಮಗ್ರ ಬೆಳವಣಿಗೆ ಮತ್ತು ಎಲ್ಲಾ ಕ್ಷೇತ್ರಗಳಿಗೆ ದೃಷ್ಟಿಕೋನದ ಮೂಲಕ ತಮಿಳುನಾಡಿನ ಪರಿವರ್ತನೆಯ ಮೇಲೆ ಕೇಂದ್ರೀಕರಿಸುತ್ತದೆ.

ತಮಿಳು ಸೂಪರ್ಸ್ಟಾರ್ ವಿಜಯ್ ದಳಪತಿ ಅವರು ಪ್ರಾರಂಭಿಸಿರುವ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ಚುನಾವಣಾ ಆಯೋಗದ ಅಧಿಕೃತ ಮಾನ್ಯತೆ 2024ರಲ್ಲಿ ಸಿಕ್ಕಿತ್ತು. ತಮ್ಮ ಸಿನಿಮಾಗಳಿಂದ ತಮಿಳುನಾಡು, ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ ಅವರು ಅದೇ ಫೆಬ್ರವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪನೆಯನ್ನು ಪ್ರಕಟಿಸಿದ್ದರು. ತಮ್ಮ ರಾಜಕೀಯ ಸಂಘಟನೆಯು ಸಾಮಾಜಿಕ ನ್ಯಾಯದ ಹಾದಿಯನ್ನು ಅನುಸರಿಸಲಿದೆ ಎಂದು ಹೇಳಿದ್ದರು. ಹಾಗೆಯೇ ತಮ್ಮ ಟಿವಿಕೆ ಪಕ್ಷವು ಪಾರದರ್ಶಕ, ಜಾತಿ ಮುಕ್ತ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಮೂಲಭೂತ ರಾಜಕೀಯ ಬದಲಾವಣೆಗಾಗಿ ಹೋರಾಡಲಿದೆ ಎಂದು ಭರವಸೆ ನೀಡಿದ್ದರು.
ತಮಿಳುನಾಡಿನ ಪಿಎಂಕೆಯಿಂದ ವಿಭಜನೆಯಾಗಿ ಪನ್ರುತಿ ಶಾಸಕ ಟಿ ವೇಲುಮುರುಗನ್ ಅವರು ಸ್ಥಾಪಿಸಿರುವ ತಮಿಳಿಗ ವಳುರಿಮೈ ಕಚ್ಚಿ (ಟಿವಿಕೆ) ಪಕ್ಷವು ‘ಟಿವಿಕೆ’ ಸಂಕ್ಷಿಪ್ತ ಹೆಸರು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ವೇಲುಮುರುಗನ್ ಅವರ ಆಕ್ಷೇಪದ ನಡುವೆಯೂ, ಅದೇ ರೀತಿಯ ಸಂಕ್ಷಿಪ್ತ ಹೆಸರು ಇರುವ ವಿಜಯ್ ಅವರ ಹೊಸ ರಾಜಕೀಯ ಪಕ್ಷ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿತ್ತು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಗುಲಾಮಿ ಮೈತ್ರಿಕೂಟಕ್ಕೆ ಸೇರುವ ಅಗತ್ಯವಿಲ್ಲ. ನಮ್ಮ ಮೈತ್ರಿಕೂಟ ಸ್ವಾರ್ಥದ ಮೈತ್ರಿಕೂಟವಾಗಿರುವುದಿಲ್ಲ. ಇದು ಸ್ವಾಭಿಮಾನ ಆಧಾರಿತ ಮೈತ್ರಿಕೂಟವಾಗಿರುತ್ತದೆ ಎಂದು ವಿಜಯ್ ಘೋಷಿಸಿದ್ದಾರೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಮತ್ತು ಡಿಎಂಕೆಯನ್ನು ಏಕೈಕ ರಾಜಕೀಯ ಶತ್ರು ಎಂದು ನಟ ವಿಜಯ್ ಹೇಳಿದ್ದರು.















