ನವದೆಹಲಿ: ಈ ವರ್ಷ ನಡೆದ ಲೋಕಸಭಾ ಚುನಾವಣೆಯ ಅಂಕಿ ಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಅದರ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ 64.64 ಕೋಟಿ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದು, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಶೇ 65.55 ಪುರುಷ ಮತದಾರರು, ಶೇ 65.78 ರಷ್ಟು ಮಹಿಳಾ ಮತದಾರರು ಮತದಾನ ಮಾಡಿದ್ದಾರೆ ಎಂದು ಆಯೋಗ ತಿಳಿಸಿದೆ.
2019ರ ಚುನಾವಣೆಯಲ್ಲಿ 726 ರಷ್ಟಿದ್ದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಈ ಬಾರಿ 800 ರಷ್ಟಾಗಿತ್ತು ಎಂದು ಆಯೋಗ ತಿಳಿಸಿದೆ.
ಈ ಸ್ವಯಂಪ್ರೇರಿತ ಅಂಕಿ ಅಂಶ ಬಿಡುಗಡೆಯು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕರ ನಂಬಿಕೆಯನ್ನು ಹೆಚ್ಚಿಸುವುದಾಗಿದೆ ಎಂದು ಆಯೋಗ ಹೇಳಿದೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಮತದಾನದ ಅಂಕಿ ಅಂಶಗಳು ಸುಳ್ಳು ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಂಕಿಅಂಶ ಬಿಡುಗಡೆ ಮಾಡಿದೆ.
ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಡೇಟಾವನ್ನು ಆಯೋಗ ಬಿಡುಗಡೆ ಮಾಡಿದೆ.
10.52 ಲಕ್ಷ ಮತಗಟ್ಟೆಗಳ ಪೈಕಿ 40ರಲ್ಲಿ ಮರು ಮತದಾನ ನಡೆದಿದೆ. 2019ರಲ್ಲಿ 540 ಕೇಂದ್ರಗಳಲ್ಲಿ ಮರು ಮತದಾನ ನಡೆದಿತ್ತು ಎಂದು ತಿಳಿಸಿದೆ.