ಚಾಮರಾಜನಗರ (Chamarajanagar): ವಿಧಾನ ಪರಿಷತ್ ನ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಜಿಲ್ಲೆಯ ನಾಲ್ವರು ಶಾಸಕರು ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಚಾಮರಾಜನಗರ ಶಾಸಕ ಯಳಂದೂರು ತಾಲೂಕು ಕಚೇರಿಯಲ್ಲಿ, ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಹಾಗೂ ಹನೂರು ಶಾಸಕ ಆರ್.ನರೇಂದ್ರ ಮತ್ತು ಗುಂಡ್ಲುಪೇಟೆಯಲ್ಲಿ, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್, ಚಾಮರಾಜನಗರದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ಮತ ಚಲಾಯಿಸಿದರು.
ಬ್ಯಾಲೆಟ್ ಪೇಪರ್ನಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಸಿಬ್ಬಂದಿ ಕೊಟ್ಟಿರುವ ಪೆನ್ ನಲ್ಲಿ ಬರೆದರೆ ಸರಿಯಾಗಿ ಕಾಣುವುದೇ ಇಲ್ಲ. ನಾವು ಯಾರಿಗೆ ಮತದಾನ ಮಾಡಿದ್ದೇವೆಂದು ಗೊತ್ತಾಗುವುದು ಹೇಗೆ? ಎಂದು ಶಾಸಕ ಪುಟ್ಟರಂಗಶೆಟ್ಟಿ ಮತಗಟ್ಟೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ನಾವು ತಂದಿರುವುದಲ್ಲ ಸರ್, ಇಲಾಖೆಯೇ ಕೊಟ್ಟಿರುವ ಪೆನ್ ಇದು ಎಂದು ಸಿಬ್ಬಂದಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರಾದರೂ, ಪುಟ್ಟರಂಗಶೆಟ್ಟಿ ಅಸಮಾಧಾನದಿಂದಲೇ ಮತದಾನ ಮಾಡಿ ಮತಗಟ್ಟೆಯಿಂದ ನಿರ್ಗಮಿಸಿದರು.
ಎನ್.ಮಹೇಶ್ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.