ಮನೆ ಸುದ್ದಿ ಜಾಲ ಚುನಾವಣಾ ವೇಳಾ ಪಟ್ಟಿ ಪ್ರಕಟ:ತಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿ: ಡಾ.ಕೆ.ವಿ.ರಾಜೇಂದ್ರ

ಚುನಾವಣಾ ವೇಳಾ ಪಟ್ಟಿ ಪ್ರಕಟ:ತಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿ: ಡಾ.ಕೆ.ವಿ.ರಾಜೇಂದ್ರ

0

ಮೈಸೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು 2023 ರ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಚುನಾವಣಾ ಮಾದರಿ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿರುವ ಹಿನ್ನೆಲೆ ಪ್ರತಿಯೊಬ್ಬರು ಚುನಾವಣೆ ನೀತಿ ಸಂಹಿತೆಯನ್ನು ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಏಪ್ರಿಲ್ 20 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಏಪ್ರಿಲ್ 21 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. 24 ಉಮೇದುಗಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು ಮೇ 10 ಚುನಾವಣೆ ನಡೆಯುವುದು ಮೇ 13 ರಂದು ಮತ ಎಣಿಕೆಯಾಗುವುದು ಮೇ 15 ಚುನಾವಣೆ ಮುಕ್ತಾಯಗೊಳ್ಳುವುದು ಮತ್ತು ಅಲ್ಲಿಯವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಮೈಸೂರಿನಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 26,22,551 ಮತದಾರರಲ್ಲಿ 13,01,022 ಪುರುಷ ಮತದಾರರು 13,21,316 ಮಹಿಳಾ ಮತದಾರರು ಹಾಗೂ 213 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಬಾರಿ 17,162 ಯುವ ಮತದಾರರು ನೋಂದಣಿಯಾಗಿದ್ದು ಒಟ್ಟು ಜಿಲ್ಲೆಯಲ್ಲಿ 47,812 ಯುವ ಮತದಾರರಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು ಫಾರ್ಮ್ -6 ನ್ನು ಭರ್ತಿ ಮಾಡಿ ಏಪ್ರಿಲ್ 11ರ ವರೆಗೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

Know your polling station ಅಭಿಯಾನವನ್ನು ಕೈಗೊಳ್ಳಲಾಗಿದ್ದು ಈ ಮೂಲಕ ಮತದಾನದ ಕುರಿತು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಮತಗಟ್ಟೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತಗಟ್ಟೆ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಬರೆಸಲಾಗಿದೆ. ಜಿಲ್ಲೆಯಲ್ಲಿ 31,754 ವಿಕಲಚೇತನ ಮತದಾರವಿದ್ದು ಅವರಿಗೆ ಸೂಕ್ತ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 80 ವರ್ಷ ದಾಟಿದ 84,917 ಮತದಾರಿದ್ದು, ಎಲ್ಲರಿಗೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಪ್ರೋತ್ಸಾಹಿಸಬೇಕು. ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ ಎಂಬತ್ತು ವರ್ಷ ಮೇಲ್ಪಟ್ಟ ಮತದಾರರುಗಳಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಬುಡಕಟ್ಟು ಜನಾಂಗದ ಮತದಾರರಿಗೆ ಯತ್ನಿಕ್ ಪೋಲಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುತ್ತಿರುವ ಮೂಲಕ ವಿಶೇಷ ರೀತಿಯಲ್ಲಿ ಹೆಚ್ಚು ಮತದಾನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ 72 ಗಂಟೆಯೊಳಗೆ ಎಲ್ಲಾ ರೀತಿಯ ಖಾಸಗಿ ಸ್ವತ್ತುಗಳ ಮೇಲೆ ಪ್ರಚುರಪಡಿಸಿರುವ ಎಲ್ಲಾ ರೀತಿಯ ಅನಧಿಕೃತ ರಾಜಕೀಯ ಜಾಹಿರಾತುಗಳನ್ನು ತೆರವುಗೊಳಿಸಲಾಗುತ್ತಿದೆ. ಚುನಾವಣೆಯನ್ನು ಮುಕ್ತ ನ್ಯಾಯಸಮ್ಮತ ಹಾಗೂ ಪ್ರತಿಯೊಬ್ಬ ಮತದಾರರು ಸಹ ಅವರ ಹಕ್ಕನ್ನು ಚಲಾಯಿಸಲು ಅಡೆತಡೆಗಳಾಗದಂತೆ ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಯನ್ನು ನಡೆಸಲು ಜಿಲ್ಲೆಯಲ್ಲಿ ಮತದಾರರು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಸಹಕರಿಸಬೇಕು. ಇದಕ್ಕಾಗಿ ಸಿ. ವಿಸಿಲ್ ಆಪ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಚುನಾವಣಾ ಸಂಬಂಧದ ದೂರುಗಳನ್ನು ಈ ತಂತ್ರಾಂಶದ ಮೂಲಕ ದಾಖಲಿಸ ಬಹುದು ಎಂದು ತಿಳಿಸಿದರು.

ಯಾವುದೇ ಕಾರ್ಯಕ್ರಮ ಮಾಡಲು ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆಯದೆ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಜಾವಗಲ್ ಶ್ರೀನಾಥ್ ಅವರು ಆಯ್ಕೆಯಾಗಿದ್ದು, ಅವರೊಟ್ಟಿಗೆ ತೃತೀಯ ಲಿಂಗಿ ಹಾಗೂ ಶತಾಯುಷಿಗಳನ್ನು ಆಹ್ವಾನಿಸಲಾಗಿದೆ. ಈ ಮೂಲಕ ಮತದಾನ ಹೆಚ್ಚುಸುವಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಈಗಾಗಲೇ 10 ಚೆಕ್ ಪೋಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚುನಾವಣಾ ತಂಡ ಹಾಗೂ ಕೇಂದ್ರದ ಸಿಬ್ಬಂದಿ ಸೇರ್ಪಡೆಯಾಗುತ್ತಾರೆ. ದಿನದ 24 ಗಂಟೆಗಳ ಕಾಲ ತಪಾಸಣೆ ನಡೆಯಲಿದೆ. ರೌಡಿ ಚಟುವಟಿಕೆ ಇರುವವರನ್ನು ಗಡಿ ಪಾರು ಮಾಡಲಾಗಿದೆ. 1493 ರೌಡಿ ಶೀಟರ್ ಇದ್ದಾರೆ, 3 ಮಂದಿಗೆ ಈಗಾಗಲೇ ಗಡಿ ಪಾರು, 9 ಮಂದಿ ಗಡಿಪಾರು ಚಾಲನೆಯಲ್ಲಿದೆ. ಈಗಾಗಲೇ 26 ಲಕ್ಷ, 25 ಕೆಜಿ ಗಾಂಜಾ, ಸೀಜ್ ಮಾಡಲಾಗಿದೆ 68 ಲಿಕ್ಕರ್ ಕೇಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಅವರು ಮಾತನಾಡಿ ಜಿಲ್ಲೆಗೆ 5 ಪ್ಯಾರಾ ಮಿಲಿಟರಿ ಫೋರ್ಸ್ ಬರಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 385 ನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಕೇರಳದ ಬಾವಲಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದರೊಟ್ಟಿಗೆ ಸರ್ಪ್ರೈಸ್ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯಿತ್ರಿ, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಮ್, ಚುನಾವಣಾ ತಹಸೀಲ್ದಾರ್ ರಾಮ್ ಪ್ರಸಾದ್ ಉಪಸ್ಥಿತರಿದ್ದರು.