ಮನೆ ರಾಜಕೀಯ ಬಜೆಟ್‌ ನಲ್ಲಿ‌ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು; ಸಚಿವ ಎಸ್.ಟಿ.ಸೋಮಶೇಖರ್

ಬಜೆಟ್‌ ನಲ್ಲಿ‌ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು; ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ನಲ್ಲಿ ಮೈಸೂರಿನ ಸರ್ವಾಂಗಿಣ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌ ಅವರು ಹೇಳಿದ್ದಾರೆ.
ಬಜೆಟ್‌ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೆ.ಆರ್.‌ ಆಸ್ಪತ್ರೆಯ ಕಟ್ಟಡಗಳ ನವೀಕರಣವನ್ನು ಮುಂದಿನ ಮೂರು ವರ್ಷದಲ್ಲಿ 89 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಉದ್ಯೋಗಸ್ಥ ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯಗಳನ್ನು ಆರಂಭಿಸಲಾಗುವುದು. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸ ಪ್ರೋತ್ಸಾಹಿಸಲು “ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ” ಎಂಬ ಹೊಸ ಯೋಜನೆಯಡಿ 1 ಸಾವಿರ ಸಾಮರ್ಥ್ಯದ ಬಹುಮಹಡಿ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
460 ಕಿ.ಮೀ. ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ಅನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಲಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೈಸೂರು ವಿಮಾನ ನಿಲ್ದಾಣದ ರನ್‌ ವೇಯನ್ನು ಕೂಡ ವಿಸ್ತರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸ್ಟಾರ್ಟ್‌ ಅಪ್‌ ಗಳನ್ನು ಉತ್ತೇಜಿಸಲು ಒತ್ತು ನೀಡಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಮಾರು 30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಮೈಸೂರು ದಿ ಗ್ಲೋಬಲ್‌ ಟೆಕ್ನಾಲಜಿ ಸೆಂಟರ್‌ ಪ್ಲಗ್‌ ಅಂಡ್‌ ಪ್ಲೇ ಸೌಲಭ್ಯವನ್ನು 2 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ 10 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.
 ರಾಜ್ಯದ 15 ಪ್ರವಾಸಿ ತಾಣಗಳ ಎಆರ್/ವಿಆರ್‌ ತುಣುಕುಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಮೊದಲಿಗೆ ಪ್ರಾಯೋಗಿಕವಾಗಿ ಮೈಸೂರು ಅರಮನೆಯ ತುಣುಕುಗಳನ್ನು ಸೃಜಿಸಲಾಗುವುದು. ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.