ನವದೆಹಲಿ : ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದು, ಬಿಹಾರದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರು ಹತ್ಯೆಯಾಗಿದ್ದಾರೆ.
ದೆಹಲಿ ಮತ್ತು ಬಿಹಾರ ಪೊಲೀಸರ ತಂಡ ಮತ್ತು ದರೋಡೆಕೋರರ ನಡುವೆ ಗುರುವಾರ ಮುಂಜಾನೆ 2:20ಕ್ಕೆ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ ನಡೆದಿದೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಪೊಲೀಸರು ಸಿಗ್ಮಾ ಗ್ಯಾಂಗ್‌ನ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ದರೋಡೆಕೋರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಎನ್‌ಕೌಂಟರ್ ನಡೆಸಿದ್ದಾರೆ.
ಗುಂಡಿನ ದಾಳಿಯಲ್ಲಿ ನಾಲ್ವರು ಆರೋಪಿಗಳಿಗೂ ಗುಂಡು ತಾಗಿದ್ದು, ಅವರನ್ನು ರೋಹಿಣಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ನಾಲ್ವರು ದರೋಡೆಕೋರರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ದರೋಡೆಕೋರರನ್ನು ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೊ (25), ಮನೀಶ್ ಪಾಠಕ್ (33), ಮತ್ತು ಅಮನ್ ಠಾಕೂರ್ (21) ಎಂದು ಗುರುತಿಸಲಾಗಿದೆ. ರಂಜನ್ ಪಾಠಕ್ ಈ ಗ್ಯಾಂಗ್‌ನ ನಾಯಕನಾಗಿದ್ದ. ಹಲವಾರು ವರ್ಷಗಳಿಂದ ಈ ಸಿಗ್ಮಾ ಗ್ಯಾಂಗ್ ಬಿಹಾರದಾದ್ಯಂತ ಸುಲಿಗೆ ಮತ್ತು ಕಾಂಟ್ರಾಕ್ಟ್ ಪಡೆದು ಹತ್ಯೆ ನಡೆಸುವುದರಲ್ಲಿ ಭಾಗಿಯಾಗಿತ್ತು.
ರಂಜನ್ ಪಾಠಕ್ ಬಂಧನಕ್ಕೆ 25,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಸೀತಾಮರ್ಹಿ ಮತ್ತು ಬಿಹಾರದ ಪಕ್ಕದ ಜಿಲ್ಲೆಗಳಲ್ಲಿ ಐದು ಪ್ರಮುಖ ಕೊಲೆಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ರಂಜನ್ ಪಾಠಕ್ ಪೊಲೀಸರಿಗೆ ಬೇಕಾಗಿದ್ದ. ಅಲ್ಲದೇ ರಂಜನ್ ಪಾಠಕ್ ಸಾಮಾಜಿಕ ಮಾಧ್ಯಮ ಮತ್ತು ಆಡಿಯೊ ಸಂದೇಶಗಳ ಮೂಲಕ ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದ, ಎಂದು ದೆಹಲಿ ಪೊಲೀಸ್ ಮೂಲ ಬಹಿರಂಗಪಡಿಸಿದೆ. ಇತ್ತೀಚಿಗೆ ದರೋಡೆಕೋರರು ಬಿಹಾರ ಚುನಾವಣೆ ಸಂಬಂಧ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಗ್ಮಾ ಗ್ಯಾಂಗ್ ಸುಮಾರು 7 ವರ್ಷಗಳಿಂದ ಸಕ್ರಿಯವಾಗಿದ್ದು, ಬಿಹಾರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೆಹಲಿಯಲ್ಲಿ ತಲೆಮರೆಸಿಕೊಂಡಿತ್ತು. ಹಲವು ದಿನಗಳವರೆಗೆ ಪೊಲೀಸರು ಇವರ ಚಲನವಲನಗಳನ್ನು ಪತ್ತೆಹಚ್ಚಿ ಬಳಿಕ ಕಾರ್ಯಾಚರಣೆಗೆ ಇಳಿದಿದ್ದಾರೆ. ಗ್ಯಾಂಗ್‌ನ ಜಾಲವನ್ನು ಪತ್ತೆಹಚ್ಚುವ ಸಲುವಾಗಿ ಹೆಚ್ಚಿನ ತನಿಖೆ ಮುಂದುವರೆದಿದೆ.














