ಮೈಸೂರು: ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಕೀಳನಪುರ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಪ್ರೌಢಶಾಲೆ ಪುಟ್ಟೇಗೌಡನಹುಂಡಿ ಇವರ ಸಹಯೋಗದಲ್ಲಿ ಪುಟ್ಟೇಗೌಡನಹುಂಡಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಕೀಳನಪುರ ಗ್ರಾಮ ಪಂಚಾಯಿತಿಯ ಸದಸ್ಯರಾದ ಮಹೇಶ್ ಅವರು ಉದ್ಘಾಟಿಸಿ ಮಾತನಾಡಿದರು.
ನೀರಿನ ಶುದ್ಧತೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸುಸ್ಥಿರ ಪರಿಸರ ನಿರ್ಮಿಸೋಣ ಮತ್ತು ಪ್ರಸ್ತುತ ದಿನಮಾನಗಳಲ್ಲಿ ಮಾನವನ ಅತಿಯಾದ ಆಸೆಯಿಂದ ಪರಿಸರ ನಾಶವಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಹವಾಮಾನದ ವೈಪರಿತ್ಯ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂದಿನಿಂದಲೇ ಪರಿಸರ ಸಂರಕ್ಷಣೆಯಲ್ಲಿ ಜಾಗೃತಗೊಳ್ಳದಿದ್ದರೆ, ಮುಂದಿನ ಪೀಳಿಗೆಯನ್ನು ನಾವೇ ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೀಳನಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾದ ಬಸವರಾಜು, ಸದಸ್ಯರಾದ ರವಿಕುಮಾರ್, ಶ್ರೀಮತಿ ಸಕ್ಕುಬಾಯಿ, ಮಂಜುಪ್ರಕಾಶ್, ಶಾಲಾ ಮುಖ್ಯ ಶಿಕ್ಷಕರಾದ ಮಹದೇವಸ್ವಾಮಿ, RLHP ಸಂಸ್ಥೆಯ ಸಂಯೋಜಕರಾದ ಶಶಿಕುಮಾರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೀಳನಪುರ ಗ್ರಾಮ ಪಂಚಾಯಿತಿ ವತಿಯಿಂದ 200 ಗಿಡಗಳನ್ನು ವಿತರಿಸಲಾಯಿತು. ಈ ವೇಳೆಯಲ್ಲಿ 30 ಗಿಡಗಳನ್ನು ಪ್ರೌಢಶಾಲಾ ಆವರಣದಲ್ಲಿ ನೆಡಲಾಯಿತು.