ಬೆಂಗಳೂರು: ಅಪಾಯಕಾರಿಯಾದ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾದಿ ಸಾಗಾಟ ಮಾಡಿ, ವಿಲೇವಾರಿ ಮಾಡುವ ಅಗತ್ಯವಿದ್ದು, ತಜ್ಞರೊಂದಿಗೆ ಸಮಾಲೋಚಿಸಿ ನೂತನ ಕರಡು ನೀತಿ ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನರ್ಸಿಂಗ್ ಹೋಂ, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯದ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ, ಜೊತೆಗೆ, ಮನೆಗಳಲ್ಲಿಯೇ ಬಳಸುವ ಸಿರೆಂಜ್, ಬ್ಯಾಂಡೇಜ್ ಇತ್ಯಾದಿ ವೈದ್ಯಕೀಯ ತ್ಯಾಜ್ಯವನ್ನು ಒಣ ತ್ಯಾಜ್ಯದ ಜೊತೆ ವಿಲೇವಾರಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೊಸ ನೀತಿ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸ್ಥಳೀಯ ಸಂಸ್ಥೆ ವಿರುದ್ಧ ಮೊಕದ್ದಮೆ ದಾಖಲಿಗೆ ಸೂಚನೆ:
ಸ್ಪಷ್ಟ ಸೂಚನೆ, ನೋಟಿಸ್ ಗಳ ಹೊರತಾಗಿಯೂ ತ್ಯಾಜ್ಯ ಜಲ ಸಂಸ್ಕರಿಸಲು ಎಸ್.ಟಿ.ಪಿ. ಅಳವಡಿಸದ ಹಾಗೂ ಅಳವಡಿಸಲಾದ ಎಸ್.ಟಿ.ಪಿ. ಕಾರ್ಯ ನಿರ್ವಹಸದೆ ಇರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಿತವಾಗಿ ಪರಿಶೀಲನೆ ನಡೆಸಿ ಸಂಬಂಧಿತ ಸ್ಥಳೀಯ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದೂಖಲಿಸುವಂತೆ ಸೂಚನೆ ನೀಡಿದರು.
ಕೆರೆ, ಕಟ್ಟೆ, ಸರೋವರಗಳಿಗೆ ಸೂಕ್ತವಾಗಿ ಸಂಸ್ಕರಣೆಯಾಗದ ತ್ಯಾಜ್ಯ ಜಲ ಸೇರುತ್ತಿರುವುದರಿಂದ ಜಲ ಮಾಲಿನ್ಯ ಆಗುತ್ತಿದ್ದು, ಜಲಚರಗಳ ಸಾವಿಗೂ ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್.ಟಿ.ಪಿ.)ಗಳ ಸಮರ್ಪಕ ಕಾರ್ಯ ನಿರ್ವಹಣೆಯನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.
ಮೀನುಗಳ ಸಾವಿನ ಪರಾಮರ್ಶೆ:
ಮಳೆಗಾಲ ಆರಂಭವಾಗುತ್ತಿದ್ದಂತೆ ಕೆರೆ, ಕಟ್ಟೆ, ಸರೋವರಗಳಲ್ಲಿ ಮೀನುಗಳು ಸೇರಿದಂತೆ ಜಲಚರಗಳು ಸಾವಿಗೀಡಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ತೆರೆದ ಮಳೆ ನೀರು ಚರಂಡಿ, ರಾಜಕಾಲುವೆಗಳಲ್ಲಿ ಸಂಗ್ರಹವಾಗುವ ಸಾವಯವ ತ್ಯಾಜ್ಯ, ಪ್ಲಾಸ್ಟಿಕ್ ಇತ್ಯಾದಿ ಮಳೆಯ ನೀರಿನ ರಭಸಕ್ಕೆ ಕೊಂಚಿಕೊಂಡು ಬಂದು ಕೆರೆ, ಕಟ್ಟೆ ಸೇರುವ ಕಾರಣ ಮತ್ತು ಸಂಸ್ಕರಣೆಯಾಗದ ತ್ಯಾಜ್ಯ ನೀರು ಸೇರ್ಪಡೆ ಜಲಚರಗಳ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ ಸಚಿವರು, ಜಲ ಮೂಲಗಳಿಗೆ ಸಂಪರ್ಕ ಇರುವ ಮಳೆ ನೀರು ಕಾಲುವೆ, ಚರಂಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಮಳೆಗಾಲಕ್ಕೆ ಮುನ್ನ ಮತ್ತು ನಿಯಮಿತವಾಗಿ ತೆರವು ಮಾಡಿ ನೀರಿನ ಗುಣಮಟ್ಟ ಕಾಪಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
ರಾಜ್ಯಾದ್ಯಂತ ಇರುವ ಕೆರೆ ಕಟ್ಟೆಗಳ ನೀರನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಲು ಕ್ರಮ ಕೈಗೊಳ್ಳಬೇಕು, ಕೈಗಾರಿಕಾ ವಲಯಗಳ ಸುತ್ತಮುತ್ತ ರಾಜಕಾಲುವೆ, ನದಿ ಮೂಲ, ಹಳ್ಳಗಳಿಗೆ ನೇರವಾಗಿ ತ್ಯಾಜ್ಯ ಹರಿಸುತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಿದರು.
ಬೆಂಗಳೂರು ಬೆಳ್ಳಂದೂರು ಕೆರೆಯ ಸುತ್ತಮುತ್ತ ಮುಗಿಲೆತ್ತರದ ಕಟ್ಟಡ ಕಟ್ಟಿರುವ ಹಲವು ಸಂಸ್ಥೆಗಳಿಂದ ಪರಿಸರ ಪರಿಹಾರ ಧನ ಸಂಗ್ರಹಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚನೆ ನೀಡಿದ್ದರೂ, ಹಣ ಸಂಗ್ರಹ ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಈ ಹಣ ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪಿಓಪಿ ಗಣೇಶ ತಯಾರಕರಿಗೆ, ಪಟಾಕಿ ಮಾರಾಟಗಾರರಿಗೆ ನೋಟಿಸ್
ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತಿದ್ದು, ಗಣಪತಿ ತಯಾರಕರು ತಮಗೆ ಮೊದಲೇ ತಿಳಿಸಿದ್ದರೆ ನಾವು ಪಿಓಪಿ ಗಣಪತಿ ಮೂರ್ತಿಗಳನ್ನೇ ತಯಾರಿಸುತ್ತಿರಲಿಲ್ಲ ಎಂದು ಪ್ರತಿ ವರ್ಷ ಹೇಳುತ್ತಾರೆ. ಹೀಗಾಗಿ ಈಗಿನಿಂದಲೇ ಎಲ್ಲ ತಯಾರಕರಿಗೆ ಪಿಓಪಿ ಗಣಪತಿ ಮೂರ್ತಿ ತಯಾರಿಸದಂತೆ ನೋಟಿಸ್ ನೀಡಿ ಎಂದು ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಇದೇ ರೀತಿ ಹಸಿರು ಪಟಾಕಿಯ ಹೊರತಾಗಿ ಹೆಚ್ಚು ಮಾಲಿನ್ಯಕಾರಕವಾದ ಸಾಮಾನ್ಯ ಪಟಾಕಿ ಮಾರಾಟ, ದಾಸ್ತಾನು ಮಾಡದಂತೆ ಪಟಾಕಿ ಮಾರಾಟಗಾರರಿಗೆ ನೋಟಿಸ್ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಪಟಾಕಿ ಮಾರಾಟಗಾರರ ವಿಳಾಸ ಪಡೆದು ಅವರಿಗೆ ಮುಂಚಿತವಾಗಿಯೇ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ಸೂಚಿಸಿ ನೋಟಿಸ್ ನೀಡಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರೇತರ ಸದಸ್ಯರುಗಳಾದ ಶರಣಕುಮಾರ್ ಮೋದಿ, ಡಾ.ಪ್ರದೀಪ್ ಸಿ, ಮರಿಸ್ವಾಮಿ ಗೌಡ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ.ರವಿ ಮತ್ತಿತರರು ಉಪಸ್ಥಿತರಿದ್ದರು.