ಮನೆ ರಾಜಕೀಯ ಪ್ರತಿಯೊಬ್ಬರೂ ಸಂವಿಧಾನ ಓದಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರತಿಯೊಬ್ಬರೂ ಸಂವಿಧಾನ ಓದಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಮೈಸೂರು: ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿಕೊಳ್ಳಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಹಾಗೂ ಬಿಜಿಎಸ್ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಉಚಿತ ವಿದ್ಯಾರ್ಥಿ ನಿಲಯದ  ಲೋಕಾರ್ಪಣೆಯನ್ನು ಮಾಡಿದ ನಂತರ ಮಾತನಾಡಿದರು.

Join Our Whatsapp Group

ನೂತನ ವಿದ್ಯಾರ್ಥಿ ನಿಲಯದಲ್ಲಿ 200 ಜನ ವಿದ್ಯಾರ್ಥಿಗಳಿಗೆ ಇಲ್ಲಿ ಓದಲು ಅವಕಾಶ ಕಲ್ಪಿಸಲಾಗಿದ್ದು, ಇನ್ನಷ್ಟು ಭಾಗದಲ್ಲಿ ವಿದ್ಯಾರ್ಥಿನಿಲಯಗಳಿವೆ. ವಿದ್ಯೆ ನೀಡುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ದೊರೆತರೆ ಮಾತ್ರ ಜ್ಞಾನ ಬೆಳೆಯಲು, ಎಲ್ಲರೂ ಸ್ವಾಭಿಮಾನದಿಂದ ಬದುಕಲು ಸಾಧ್ಯ. ವಿದ್ಯೆ ಕಲಿಯದೇ ಹೋದರೆ ಯೋಚನಾಪರವಾಗಲು ಸ್ವಾಭಿಮಾನಿಗಳಾಗಲು, ಜ್ಞಾನಿಗಳಾಗಲು ಸಾಧ್ಯವಿಲ್ಲ. ಆದರೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ. ವೈಜ್ಞಾನಿಕ, ವೈಚಾರಿಕತೆಯನ್ನು ಬೆಳೆಸುವ ಶಿಕ್ಷಣ ಅಗತ್ಯ. ಮಾತನಾಡಲು ಓದು ಬರೆಯಲು ಕಲಿತರೆ ಅದು ವಿದ್ಯೆಯಲ್ಲ. ವಿದ್ಯೆ ಎಂದರೆ ನಮ್ಮ ಯೋಚನೆ, ನಿಲುವುಗಳು, ವೈಜ್ಞಾನಿಕವಾಗಿ, ವೈಚಾರಿಕವಾಗಿರಬೇಕು. ಆಗ ಮಾತ್ರ ವಿದ್ಯೆ ಕಲಿತದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.

ಜಾತಿವಾದಿಗಳಾದರೆ ಪ್ರಯೋಜನವಿಲ್ಲ: ವಿದ್ಯೆ ಕಲಿತು ಜಾತ್ಯತೀತವಾಗಿ ಯೋಚಿಸುವುದನ್ನು ಬಿಟ್ಟು, ಜಾತಿವಾದಿಗಳಾದರೆ ಏನು ಪ್ರಯೋಜನವಿಲ್ಲ ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ನಾವೆಲ್ಲರೂ ಆಕಸ್ಮಿಕವಾಗಿ ಯಾವುದೋ ಜಾತಿ, ಧರ್ಮಗಳಲ್ಲಿ ಹುಟ್ಟಿರುತ್ತೇವೆ. ಹಾಗೆಂದು ನಾವು ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ. ನಾವು ಹುಟ್ಟುತ್ತಾ ವಿಶ್ವಮನುಷ್ಯರಾಗಿರುತ್ತೇವೆ, ಬೆಳೆಯುತ್ತಾ ಸಮಾಜದ ಪ್ರಭಾವದಿಂದಾಗಿ ಅಲ್ಪಮಾನವರಾಗುತ್ತೇವೆ. ರಾಷ್ಟ್ರ ಕವಿ ಕುವೆಂಪು ಬಯಸಿದ್ದು ಎಲ್ಲರೂ ವಿಶ್ವ ಮಾನವರಾಗಬೇಕೆಂದು. ಅವರ ಕನಸನ್ನು ನನಸು ಮಾಡಲು ವೈಚಾರಿಕತೆ, ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಧರ್ಮ ಅಂದರೆ ಬದುಕಿನ ಮಾರ್ಗ:  ಕೆಲವರು ಮನುಷ್ಯ, ಮನುಷ್ಯರಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಾರೆ. ಅದಕ್ಕೆ ಬಲಿಯಾಗದೆ, ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಧರ್ಮ ಅಂದರೆ ಬದುಕಿನ ಮಾರ್ಗ. ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯಾ ಎಂದಿದ್ದಾರೆ. ದಯೆ ಇಲ್ಲದ ಧರ್ಮ ಅದ್ಯಾವುದಯ್ಯ ಎಂದಿದ್ದಾರೆ. ಮನುಷ್ಯ, ಧರ್ಮವಿರುವುದು ಮನುಷ್ಯನ ಒಳಿತಿಗಾಗಿ, ಅವನ ತ್ತಮ ಬದುಕಿಗಾಗಿ. ಧರ್ಮಕ್ಕಾಗಿ ಮನುಷ್ಯ ಇಲ್ಲ. ಈ ಬಗ್ಗೆ ನಾವು ಸ್ಪಷ್ಟತೆ ಹೊಂದಬೇಕು. ಮನುಷ್ಯ ಮನುಷ್ಯನನ್ನು ದಯೆ, ಕರುಣೆಯಿಂದ ಕಾಣುವುದೇ ಧರ್ಮ. ಯಾವ ಧರ್ಮದಲ್ಲಿ ದಯೆ, ಪ್ರೀತಿ, ಕರುಣೆ ಇಲ್ಲವೋ, ಅದು ಧರ್ಮವಲ್ಲ. ಮನುಷ್ಯರಾಗಲು ಪ್ರಯತ್ನಿಸೋಣ. ಮಾನವಧರ್ಮ,ಮನುಷ್ಯ ಜಾತಿ, ಎಲ್ಲರಿಗೂ ಉತ್ತಮ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಸಮಾಜವಾಗಬೇಕು ಎನ್ನಲು ಶಿಕ್ಷಣ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.