ವ್ಯಕ್ತಿ ಸಾಯುವ ಹಂತದಲ್ಲಷ್ಟೇ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡುವ ವಿವೇಚನಾಧಿಕಾರ ಚಲಾಯಿಸಬಾರದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
[ವಿಜಯ್ ಅಗರವಾಲ್ ಪರೋಕರ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಸಂವಿಧಾನದ 21 ನೇ ವಿಧಿಯು ಜೀವಿಸುವ ಮೂಲಭೂತ ಹಕ್ಕನ್ನಷ್ಟೇ ಅಲ್ಲದೆ ಘನತೆಯಿಂದ ಬದುಕುವ ಹಕ್ಕನ್ನು ಜೊತೆಗೆ ಆರೋಗ್ಯಕರ ಜೀವನ ನಡೆಸುವ ಹಕ್ಕನ್ನು ಒದಗಿಸುತ್ತದೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಹೇಳಿದರು. ಈ ಹಿನ್ನೆಲೆಯಲ್ಲಿ ಆರೋಪಿಗೆ ಸಮರ್ಪಕ ಮತ್ತು ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
“ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಂಧಿತ ವ್ಯಕ್ತಿಗೆ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಈ ನ್ಯಾಯಾಲಯ ದೃಢವಾಗಿ ನಂಬುತ್ತದೆ. ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡುವ ವಿವೇಚನಾಧಿಕಾರಯನ್ನು ವ್ಯಕ್ತಿ ಕೊನೆಯುಸಿರೆಳೆದಿರುವಾಗ ಅಥವಾ ಅವನು ಬದುಕಲಾರದ ಸ್ಥಿತಿಯಲ್ಲಿದ್ದಾಗ ಮಾತ್ರವಷ್ಟೇ ಚಲಾಯಿಸಬೇಕು ಎಂದಲ್ಲ”ಎಂದು ನ್ಯಾಯಾಲಯ ಹೇಳಿದೆ.
ಜಾರಿ ನಿರ್ದೇಶನಾಲಯ ಹೂಡಿದ್ದ ಮೊಕದ್ದಮೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತ ವಿಜಯ್ ಅಗರ್ವಾಲ್ ಎಂಬುವವರಿಗೆ ಜಾಮೀನು ನೀಡುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅಗರ್ವಾಲ್ ಅವರು ಪ್ರೋಲ್ಯಾಪ್ಸ್ಡ್ ಇಂಟರ್ವರ್ಟೆಬ್ರಲ್ ಡಿಸ್ಕ್ ಅಂಡ್ ಲುಂಬರ್ ಕೆನಾಲ್ ಸ್ಟೆನೋಸಿಸ್ ಎಂಬ ನರರೋಗದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಜುಲೈ 14ರಂದು, ಹಠಾತ್ ಬಿದ್ದ ಅರ್ಜಿದಾರರ ಬಾಯಿಯಿಂದ ನೊರೆ ಬರಲಾರಂಭಿಸಿತು. ಜೈಲು ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರೂ ನರಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬುದನ್ನು ಪರಾಮರ್ಶಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆದರೆ ಜಾಮೀನು ಅರ್ಜಿ ವಿರೋಧಿಸಿದ ಜಾರಿ ನಿರ್ದೇಶನಾಲಯ , ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ನೀಡುವಂತಹ ಸ್ಥಿತ್ಯಂತರಗಳೇನೂ ಆಗಿಲ್ಲ. ಅರ್ಜಿದಾರರು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ವಾದಿಸಿತು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಕೆಲ ಷರತ್ತಗಳನ್ನು ವಿಧಿಸಿ ಅಗರ್’ವಾಲ್ ಅವರಿಗೆ ಜಾಮೀನು ನೀಡಿತು.