ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್ ಖಂಡಿಸಿದ್ದಾರೆ.
ಈ ಕುರಿತು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದು ನಮ್ಮ ಸಂಸ್ಕೃತಿ ಅಲ್ಲ. ಚುನಾವಣೆಯನ್ನು ಏನಿದ್ದರೂ ನಮ್ಮ ತತ್ವ, ಸಿದ್ಧಾಂತದ ಮೇಲೆ ಎದುರಿಸಬೇಕೇ ವಿನಹ ಈ ರೀತಿಯ ಕೃತ್ಯಗಳನ್ನು ಸಗಬಾರದು. ಚುನಾವಣೆ ವಿರುದ್ಧ ದಿಕ್ಕಿನಿಂದ ಸಾಗುತ್ತಿದೆ ಎಂಬುದು ಅರಿವಾಗಿರಬೇಕು. ಹೀಗಾಗಿ, ಹತಾಶೆಯಿಂದ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆಯನ್ನು ಆರೋಗ್ಯಕರವಾಗಿ ಎದುರಿಸಬೇಕು. ಅದರ ಬದಲು ಈ ರೀತಿ ಅಡ್ಡದಾರಿ ಹಿಡಿಯಬಾರದು. ಪ್ರಚಾರಕ್ಕೆ ತೆರಳಿದ್ದವರ ಮೇಲೆ ಹಲ್ಲೆ ನಡೆಸಿರುವ ವಿಚಾರವಾಗಿ ಈಗಾಗಲೇ ಡಿಐಜಿ ಅವರ ಜೊತೆ ಚರ್ಚಿಸಿದ್ದೇನೆ. ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇವೆ ಎಂದು ಅವರು ತಿಳಿಸಿದರು.
‘ಡಾಕ್ಟರ್ ವರ್ಸಸ್ ಡಾಕು’ ಎಂಬ ಪದ ಬಳಕೆ ಬಗ್ಗೆಯೂ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಟೀಕೆಗಳನ್ನು ಮಾಡಬಾರದು. ಚುನಾವಣೆಯಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ. ನಮ್ಮ ತತ್ವ ಸಿದ್ಧಾಂತಗಳ ಆಧಾರದಲ್ಲಿಯೇ ಪ್ರಚಾರ ಮಾಡಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪರ ಪ್ರಚಾರ ನಡೆಸಿದ್ದಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಕೆಂಪನಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಕೆಂಪನಹಳ್ಳಿ ನಿವಾಸಿ ಬೋರೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು.
ಮತ್ತೊಂದೆಡೆ, ಮಂಜುನಾಥ್ ಪರ ಪ್ರಚಾರ ಮಾಡಿದ್ದ ಬಿಜೆಪಿ ಕಾರ್ಯಕರ್ತ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದರು.