ನವದೆಹಲಿ: ಕಳೆದ ಕೆಲವು ದಿನಗಳಿಂದ ಹಲವಾರು ವಿಮಾನಗಳಿಗೆ ಸುಳ್ಳು ಬಾಂಬ್ ಬೆದರಿಕೆ ಕರೆ ಬಂದಿದ್ದು, ಗುರುವಾರ (ಅ.24)ವೂ ಇಂಡಿಗೋ, ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಕನಿಷ್ಠ 85 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿ ತಿಳಿಸಿದ್ದು, ಕಳೆದ 10 ದಿನಗಳಲ್ಲಿ 250ಕ್ಕೂ ಅಧಿಕ ಇಂತಹ ಬೆದರಿಕೆ ಕರೆಗಳು ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ಮೂರ್ನಾಲ್ಕು ದಿನಗಳಲ್ಲಿ 170ಕ್ಕೂ ಅಧಿಕ ವಿಮಾನಗಳು ಬಾಂಬ್ ಬೆದರಿಕೆಯ ಕರೆ ಸ್ವೀಕರಿಸಿದ್ದವು. ಆದರೆ ಈ ಬಗ್ಗೆ ಶೋಧ ಕಾರ್ಯ ಹಾಗೂ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಇದೊಂದು ನಕಲಿ ಬೆದರಿಕೆ ಪ್ರಕರಣ ಎಂದು ತಿಳಿಸಿದ್ದಾರೆ.
ಹೀಗೆ ಅಸಲಿ, ನಕಲಿ ಸುದ್ದಿಯೊಳಗೆ ನೂರಾರು ಪ್ರಯಾಣಿಕರಿಗೆ ಭದ್ರತೆ ನೀಡುವ ತಲೆನೋವು ಒಂದು ಕಡೆಯಾದರೆ, ವಿಮಾನ ಪ್ರಯಾಣಿಕರಿಗೆ ಪ್ರಯಾಣದ ವ್ಯವಸ್ಥೆ ಕಲ್ಪಿಸುವುದು ಮತ್ತೊಂದು ಇಕ್ಕಟ್ಟಿನ ಸ್ಥಿತಿಯಾಗಿದೆ ಎಂದು ತಿಳಿಸಿದೆ.
ಇತ್ತೀಚೆಗೆ ನಕಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೊಂದು ಕಡಿವಾಣ ಹಾಕಬೇಕೆಂದು ಮುಂದಾಗಿರುವ ಕೇಂದ್ರ ಸರ್ಕಾರ, ಯಾರು ನಕಲಿ ಕರೆ ಮಾಡುವ ಕೃತ್ಯದಲ್ಲಿ ಶಾಮೀಲಾಗುತ್ತಾರೋ ಅವರಿಗೆ No fly ಲಿಸ್ಟ್ ಗೆ ಸೇರ್ಪಡೆಗೊಳಿಸುವ ಪ್ರಸ್ತಾಪ ಮುಂದಿಟ್ಟಿದೆ ಎಂದು ವರದಿ ವಿವರಿಸಿದೆ.














